ಸಂವರ್ಧನೆಯಲ್ಲಿ ಉಪಯೋಗಿಸುವ ಹೆಣ್ಣು ಹಾಗೂ ಗಂಡು ಕುರಿಗಳು ಒಂದೇ ವಂಶಾವಳಿಯಿಂದ ಬಂದಿರಬಾರದು ಹಾಗೂ ಒಳ/ಅಂತರ ಸಂಕರಣ ಸಂವರ್ಧನೆಯನ್ನು ಯಾವ ಕಾರಣಕ್ಕೂ ಅನುಸರಿಸಬಾರದು.
- ಸಾಮಾನ್ಯವಾಗಿ ಹೆಣ್ಣು ಕುರಿಗಳು 9 ರಿಂದ 13 ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ಬೆದೆಗೆ ಬರುತ್ತವೆ.
- ಹೆಣ್ಣು ಕುರಿಗಳು ಪ್ರಾಯಕ್ಕೆ ಬಂದಿದ್ದರೂ ಸಹ ಅವುಗಳ ಗಾತ್ರ ಮತ್ತು ಮೈಕಟ್ಟನ್ನು ನೋಡಿಕೊಂಡು ಟಗರನ್ನು ಸಂವರ್ಧನೆಗೆ ಬಿಡಬೇಕು.
- ಸಂವರ್ಧನೆಯ ಕಾರ್ಯವನ್ನು ಕೃತಕಗರ್ಭಧಾರಣೆ ಮೂಲಕ ಮಾಡಬಹುದು ಅಥವಾ ಟಗರನ್ನು ಹೆಣ್ಣು ಕುರಿಯೊಂದಿಗೆ ಸಂತಾನೋತ್ಪತ್ತಿಗೆ ಬಿಡಬಹುದು. ಸಂವರ್ಧನೆಗೆ ಸಾಮಾನ್ಯವಾಗಿ 15 ರಿಂದ 20 ಹೆಣ್ಣು ಕುರಿಗಳಿಗೆ ಒಂದು ಬೀಜದ ಟಗರು ಬೇಕಾಗುತ್ತದೆ.
- ಕುರಿಗಳ ಗರ್ಭಧಾರಣೆಯ ಅವಧಿ 145-150 ದಿನಗಳು (ಸುಮಾರು 5 ತಿಂಗಳು).
- ಮರಿ ಈಳಿದ ನಂತರ ಕುರಿಗಳು ಮತ್ತೆ 2 ರಿಂದ 3 ತಿಂಗಳ ಅವಧಿಯಲ್ಲಿ ಬೆದೆಗೆ ಬರುತ್ತವೆ. ಈ ಸಮಯದಲ್ಲಿ ಕುರಿ ಪಾಲಕರು ಜಾಗೃತರಾಗಿದ್ದು ಕುರಿಗಳಿಗೆ ಗರ್ಭ ಕಟ್ಟಿಸಲೇಬೇಕು.
- ಗರ್ಭಕಟ್ಟಿಸುವ ಕಾಲ ಮಾರ್ಚ್ -ಎಪ್ರಿಲ್ ತಿಂಗಳು, ಇಲ್ಲವೇ ಜುಲೈಯಿಂದ ಅಗಸ್ಟ್ ತಿಂಗಳ ಅಂತ್ಯದವರೆಗೆ. ಈ ಸಮಯದಲ್ಲಿ ಕುರಿಗಳಿಗೆ ಗರ್ಭಕಟ್ಟಿಸಿದರೆ ಅವು ಅಗಸ್ಟ್ ನಿಂದ ಸೆಪ್ಟೆಂಬರ್ ತಿಂಗಳವರೆಗೂ ಹಾಗೂ ಡಿಸೆಂಬರ್ ನಿಂದ ಜನವರಿ ತಿಂಗಳವರೆಗೂ ಮರಿ ಹಾಕುತ್ತವೆ. ಸಾಮನ್ಯವಾಗಿ ಕುರಿಗಳು ಅಗಸ್ಟ್ ನಿಂದ ಜನವರಿ ತಿಂಗಳವರೆಗೆ ಹಾಕುವುದೇ ಹೆಚ್ಚು.
- ವರ್ಷದಲ್ಲಿ ಎರಡು ಸಾರಿ ಮರಿ ಈಳಿಯುವುದನ್ನು ನಿರೀಕ್ಷಿಸುವುದು ಕಷ್ಟ ಆದರೆ, ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಮರಿ ಪಡೆಯಬಹುದು.
- ಉತ್ತಮ ಗುಣಮಟ್ಟದ ಹಾಗೂ ಧೃಡಕಾಯದ ಮರಿಗಳ ಉತ್ಪಾದನೆಗೆ ಸಂಕರಣ ಪದ್ಧತಿ ಅನುಸರಿಸುವುದು ಸೂಕ್ತ ಕ್ರಮ. ಹೆಣ್ಣು ಮತ್ತು ಗಂಡು ಕುರಿಗಳನ್ನು ಬೇರೆ ಬೇರೆ ಹಿಂಡುಗಳಿಂದ ಆಯ್ಕೆ ಮಾಡಿ ಸಂವರ್ಧನೆ ಮಾಡಿಸಬೇಕು. ಈ ಕುರಿಗಳು ಅನುವಂಶೀಯ ರೋಗ-ರುಜಿನಗಳಿಂದ ಮುಕ್ತವಿರಬೇಕು.