Responsive Image

ಸಂತಾನೋತ್ಪತ್ತಿ

ಪ್ರತಿ ಜಾನುವಾರುವಿನ ತಳಿ ಸಂವರ್ಧನೆಯನ್ನು ಕೈಗೊಳ್ಳುವ ಮೊದಲು ಅವುಗಳ ಸಂಪೂರ್ಣ ಸಂತಾನೋತ್ಪತ್ತಿ ಕ್ರಿಯೆಯ ಜ್ಞಾನ ಅವಶ್ಯ. ಮೇಕೆಗಳಲ್ಲಿ ಬೆದೆ ಚಕ್ರ, ಬೆದೆಯ ಅವಧಿ, ಹೋತದೊಂದಿಗೆ ಮಿಲನಗೊಳಿಸಬೇಕಾದ ಸಮಯ ಹಾಗೂ ಫಲವಂತಿಕೆ ಇತ್ಯಾದಿ ವಿಷಯಗಳ ಸಂಪೂರ್ಣ ಮಾಹಿತಿ ನಮಗೆ ಇರಬೇಕು.

ಬೆದೆಯ ಚಕ್ರ:

ಹೆಣ್ಣು ಮೇಕೆ ವಯಸ್ಕ ಆಡಿನ ದೇಹದ ತೂಕದ 70% ಬೆಳೆದಾಗ ಪ್ರೌಢಾವಸ್ಥೆಯನ್ನು ತಲುಪಿ ಬೆದೆಯ ಚಕ್ರವು ಆರಂಭವಾಗುತ್ತದೆ. ಇಲ್ಲಿ ಮೇಕೆ ಪ್ರೌಢಾವಸ್ಥೆ ತಲುಪಲು ನಿರ್ಧಿಷ್ಟ ದೈಹಿಕ ತೂಕವನ್ನು ಹೊಂದುವುದು, ಅಂದರೆ ವಯಸ್ಕ ಆಡಿಗೆ ನಿಗದಿಯಾದ ದೈಹಿಕ ತೂಕದ 60 ರಿಂದ 70% ರಷ್ಟನ್ನು ತಲುಪಿದಾಗ ಮಾತ್ರ ಮೇಕೆಗಳಲ್ಲಿ ಬೆದೆ ಕಾಣಿಸಿಕೊಳ್ಳುತ್ತದೆ. ಈ ಕ್ರಿಯೆಯು ಮೇಕೆಗಳ ತಳಿ ಹಾಗೂ ಆಹಾರ ಪೂರೈಕೆಯ ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಪ್ರೌಢಾವಸ್ಥೆ ತಲುಪಿದ ನಂತರ ಪ್ರತಿ 18 ರಿಂದ 21 ದಿನಗಳಲ್ಲಿ ಬೆದೆಯ ಪುನರಾವರ್ತನೆಯಾಗುತ್ತಿರುತ್ತದೆ. ಸಾಮಾನ್ಯವಾಗಿ ಆಡುಗಳನ್ನು ಒಂದು ವರ್ಷದ ಪ್ರಾಯದಲ್ಲಿ ಸಂತಾನೋತ್ಪತ್ತಿಗೆ ತೊಡಗಿಸಬಹುದು.

ಬೆದೆಯ ಚಿನ್ಹೆಗಳು:

ಬೆದೆಯಲ್ಲಿರುವ ಆಡುಗಳ ಹಿಂಡಿನಲ್ಲಿ ಹೋತ ಇದ್ದರೆ ಆಡು ಬೆದೆಗೆ ಬಂದ ಆಡನ್ನು ಸರಳವಾಗಿ ಗುರುತಿಸುತ್ತದೆ. ಸಾಮಾನ್ಯವಾಗಿ ಬೆದೆಯಲ್ಲಿರುವ ಆಡುಗಳಲ್ಲಿ ಈ ಕೆಳಕಂಡ ಚಿನ್ಹೆಗಳನ್ನು ಗುರುತಿಸಬಹುದು.

Responsive image

ಹೋತಗಳಲ್ಲಿ ಸಂತಾನೋತ್ಪತ್ತಿ:

ಗಂಡು ಮೇಕೆ ಅಥವಾ ಹೋತಗಳು ತಳಿಸಂವರ್ಧನೆಯಲ್ಲಿ ಪ್ರಮುಖವಾದ ಪ್ರಾತ್ರವಹಿಸುತ್ತದೆ. ಸಾಮಾನ್ಯವಾಗಿ 6 ರಿಂದ 8 ತಿಂಗಳ ವಯಸ್ಸಿನಲ್ಲಿ ಹೋತಗಳಲ್ಲಿ ವೀಯಾ೯ಣುಗಳ ಉತ್ಪಾದನೆ ಆರಂಭವಾಗುತ್ತದೆ. ಒಂದು ವರ್ಷದ ಹೋತಗಳನ್ನು ಸಂತಾನೋತ್ಪತ್ತಿಗೆ ತೊಡಗಿಸುವುದು ಒಳಿತು. ಹೋತಗಳು ಎರಡು ವರ್ಷಗಳು ಪ್ರಾಯದ್ದಾದರೆ ಉತ್ತಮ ಫಲಿತಾಂಶಗಳು ದೊರೆಯುತ್ತದೆ. ಹೋತದ ಪ್ರಾಯವು ಒಂದು ವರ್ಷದಾಗಿದ್ದರೆ ಪ್ರತಿ 10 ಆಡುಗಳಿಗೆ ಒಂದರಂತೆ; ಎರಡು ವರ್ಷಗಳಾಗಿದ್ದರೆ ಪ್ರತಿ 25 ಆಡುಗಳಿಗೆ ಒಂದರಂತೆ ಮತ್ತು ಮೂರು ವರ್ಷಗಳಾದರೆ ಪ್ರತಿ 40 ಆಡುಗಳಿಗೆ ಒಂದರಂತೆ ಪಾಲನೆಮಾಡಬೇಕಾಗುತ್ತದೆ. ರೈತರು ತಮ್ಮ ಆಡುಗಳ ಗುಂಪಿನಲ್ಲೇ ಜನಿಸಿದ ಹೋತಗಳನ್ನು ಸಂವರ್ಧನೆಗಾಗಿ ಬಳಸಬಾರದು. ಆನುವಂಶಿಕ ತೊಂದರೆಗಳನ್ನು ತಪ್ಪಿಸಲು ಪ್ರತಿ 02 ವರ್ಷಕ್ಕೆ ಒಮ್ಮೆಯಾದರೂ ಹೋತಗಳನ್ನು ಬಾಹ್ಯವಾಗಿ ಖರೀದಿಸಿ ಬದಲಿಸಬೇಕು.

ಮೇಕೆಗಳ ಸಂವರ್ಧನೆ

ಸಂತಾನೋತ್ಪತ್ತಿಯಲ್ಲಿ ಉಪಯೋಗಿಸುವ ಮೇಕೆಗಳನ್ನು ಸುಧಾರಿಸಿದ ತಳಿ ಹಾಗೂ ಹಿಂಡುಗಳಿಂದ ಆಯ್ಕೆ ಮಾಡಿಕೊಳ್ಳಬೇಕು. ಈ ಮೇಕೆಗಳು ಅನುವಂಶೀಯ ರೋಗಗಳಿಂದ ಮುಕ್ತವಾಗಿರಬೇಕು. ಸಂವರ್ಧನೆಗೆ ಆಯ್ಕೆ ಮಾಡುವ ಮೇಕೆಗಳು ಈ ಕೆಳಗೆ ಸೂಚಿಸಿರುವ ಗುಣ ಹಾಗೂ ಸಾಮರ್ಥ್ಯಗಳನ್ನು ಹೊಂದಿರಬೇಕು.

Responsive image

ಸಂತಾನೋತ್ಪಾದನಾ ಕ್ರಿಯೆ:

ಆಡುಗಳಲ್ಲಿ ಸಂತಾನೋತ್ಪಾದನಾ ವ್ಯೂಹವು ಎರಡು ಅಂಡಾಶಯಗಳು, ಅಂಡನಾಳಗಳು, ಗರ್ಭಕೋಶ, ಯೋನಿ ಮತ್ತು ಉಪಸ್ಥೆಯನ್ನು ಒಳಗೊಂಡಿರುತ್ತದೆ. ಪ್ರೌಢಾವಸ್ಥೆಯನ್ನು ತಲುಪಿದ ಆಡುಗಳಲ್ಲಿ ಅಂಡಾಶಗಳು ಅಂಡಕೋಶಿಕೆಗಳನ್ನು ಉತ್ಪಾದಿಸುತ್ತವೆ. ಮುಂದೆ ಜೀವಮಾನಪೂರ್ತಿ ಈ ಕ್ರೀಯೆ ನಡೆಯುತ್ತಿರುತ್ತದೆ. ಅಂಡಕೋಶಿಕೆಗಳಲ್ಲಿ ಪಕ್ವಗೊಂಡ 30 ರಿಂದ 36 ಘಂಟೆಗಳ ನಂತರ ಬಿಡುಗಡೆಗೊಂಡ ಅಂಡನಾಳದ ಮೂಲಕ ಗರ್ಭಕೋಶದ ಕಡೆಗೆ ಚಲಿಸುತ್ತದೆ. ಬಿಡುಗಡೆಯಾದ ಅಂಡಾಣುಗಳು 12 ರಿಂದ 14 ಘಂಟೆಗಳ ವರೆಗೆ ಜೀವಂತವಾಗಿರುತ್ತದೆ. ಈ ಅವಧಿಯೊಳಗೆ ಹೋತದೊಡನೆ ಮಿಲನವಾದಲ್ಲಿ ಗರ್ಭಕೋಶದಲ್ಲಿರುವ ವೀಯಾ೯ಣುಗಳು ಅಂಡಾಣುವಿನೆಡೆಗೆ ಚಲಿಸಿ ಯಾವುದಾದರೋಂದು ವೀಯಾ೯ಣು ಅಂಡಾಣುವಿನೊಂದಿಗೆ ಸಂಯೋಗ ಹೊಂದಿ ಅಂಡಾಣುವನ್ನು ಫಲಿತವಾಗಿಸುತ್ತದೆ. ಫಲಿತ ಅಂಡಾಣುವು ದುಪ್ಪಟ್ಟು ಸಂಖ್ಯೆಯಲ್ಲಿ ವೃದ್ಧಿಸುತ್ತಾ ಭ್ರೂಣವಾಗಿ ಮುಂದಿನ 15 ರಿಂದ 20 ದಿನಗಳಲ್ಲಿ ಗರ್ಭಕೋಶದಲ್ಲಿ ನೆಲೆಗೊಂಡು ಬೆಳೆಯಲಾರಂಭಿಸುತ್ತದೆ. ಗರ್ಭಧರಿಸಿದ ನಂತರ 148 ರಿಂದ 155 ದಿನಗಳಲ್ಲಿ ಪೂರ್ಣ ಬೆಳೆದ ಮರಿಯ ಜನನವಾಗುತ್ತದೆ. ಎರಡು ಅಥವಾ ಮೂರು ಅಂಡಾಣುಗಳು ಫಲಿತಗೊಂಡಿದ್ದರೆ ಅವಳಿ ತ್ರಿವಳಿಗಳು ಜನಿಸುತ್ತವೆ. ಅಂಡಾಣುವು ಪಲಿತವಾಗದಿದ್ದರೆ ಇಲ್ಲವೆ ಭ್ರೂಣವು ಮೃತವಾದರೆ ಪುನರಾವರ್ತನೆಯಾಗುತ್ತದೆ.

ಹಗಲಿನ ಅವಧಿ ಹೆಚ್ಚಾಗಿರುವ ಋತುಮಾನದಲ್ಲಿ ಸಾಮಾನ್ಯವಾಗಿ ಆಡುಗಳು ಬೆದೆಗೆ ಬರುವದು ವಿಳಂಬವಾಗುತ್ತದೆ. ಬೆಳಕಿನ ಕಿರಣಗಳು ಕಣ್ಣುಗಳ ಮೂಲಕ ಹಾದು ಮೆದುಳಿನ ಪೈನಿಯಲ್ ಗ್ರಂಥಿಯಲ್ಲಿ ಸೆರೋಟೋನಿನ್ ರಸಾಯನಿಕವು ಮೆಲಟೋನಿನ್ ರಾಸಾಯನಿಕವಾಗಿ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಮೆಲೊಟೋನಿನ್ ರಾಸಾಯನಿಕವು ಹೈಪೋಥಲಮಸ್‌ನಿಂದ ಅಂಡಾಶಯ ಮತ್ತು ವೃಷಣಗಳ ಮೇಲೆ ಪ್ರಭಾವ ಬೀರುವ ಚೋದಕಗಳ ಬಿಡುಗಡೆಯನ್ನು ನಿಯಂತ್ರಿಸುತ್ತದೆ.

ಗಮನಿಸಬೇಕಾದ ಅಂಶಗಳು:

ಸಂವರ್ಧನೆಯಲ್ಲಿ ಉಪಯೋಗಿಸುವಂತಹ ಹೆಣ್ಣು ಹಾಗೂ ಗಂಡು ಮೇಕೆಗಳು ಒಂದೇ ವಂಶಾವಳಿಯಿಂದ ಬಂದಿರಬಾರದು ಹಾಗೂ ಒಳ ಸಂಕರಣ ಸಂವರ್ಧನೆಯನ್ನು ಯಾವ ಕಾರಣಕ್ಕೂ ಅನುಸರಿಸಬಾರದು. ಸಾಮಾನ್ಯವಾಗಿ ಹೆಣ್ಣು ಮೇಕೆಗಳು 8 ರಿಂದ 12 ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ಬೆದೆಗೆ ಬರುತ್ತವೆ. ಅದೇ ರೀತಿ ಹೋತವು ಸಹ 12 ರಿಂದ 14 ತಿಂಗಳ ಅವಧಿಯಲ್ಲಿ ಪ್ರಾಯಕ್ಕೆ ಬರುತ್ತವೆ. ಹೆಣ್ಣು ಮೇಕೆಗಳು ಪ್ರಾಯಕ್ಕೆ ಬಂದಿದ್ದರೂ ಸಹ ಅವುಗಳ ಗಾತ್ರ ಮತ್ತು ಮೈಕಟ್ಟನ್ನು ನೋಡಿಕೊಂಡು ಗಂಡು ಮೇಕೆಯೊಂದಿಗೆ ಸಂವರ್ಧನೆಗೆ ಬಿಡಬೇಕು. ಸಂವರ್ಧನೆಯ ಕಾರ್ಯವನ್ನು ಕೃತಕ ಗರ್ಭಧಾರಣೆ ಮೂಲಕ ಮಾಡಬಹುದು ಅಥವಾ ಗಂಡು ಮೇಕೆಯೊಂದಿಗೆ ಹೆಣ್ಣು ಮೇಕೆಗಳನ್ನು ಸಂತಾನೋತ್ಪತ್ತಿಗೆ ಬಿಡಬಹುದು. ಸಂವರ್ಧನೆಗೆ ಸಾಮಾನ್ಯವಾಗಿ 25 ರಿಂದ 30 ಹೆಣ್ಣು ಮೇಕೆಗಳಿಗೆ ಒಂದು ಗಂಡು ಮೇಕೆ ಬೇಕಾಗುತ್ತದೆ. ಹೆಣ್ಣು ಮೇಕೆಬೆದೆಗೆ ಬಂದ 1 ರಿಂದ 15 ಗಂಟೆಗಳ ಅವಧಿಯಲ್ಲಿ ಹೋತದಿಂದ ಗರ್ಭಧಾರಣೆ ಮಾಡಿಸಬೇಕು. ಹೆಣ್ಣು ಮೇಕೆ ಬೆದೆಗೆ ಬಂದಿದ್ದನ್ನು ಗುರುತಿಸಬೇಕು. ಬೆದೆಗೆ ಬಂದ ಮೇಕೆಗಳನ್ನು ಗರ್ಭಧಾರಣ ಮಾಡಿಸಲು ಒಂದು ಸಾರಿ ಹೋತ ಬಿಟ್ಟರೆ ಸಾಕು. ಮೇಕೆ ಗರ್ಭಧರಿಸಿದ ಮೇಲೆ ಸರಾಸರಿ 150 ದಿನಗಳಲ್ಲಿ ಮರಿ ಹಾಕುತ್ತವೆ.

ಮರಿ ಹಾಕಿದ ನಂತರ ಮೇಕೆಗಳು ಮತ್ತೆ 2 ರಿಂದ 3 ತಿಂಗಳ ಅವಧಿಯಲ್ಲಿ ಬೆದೆಗೆ ಬರುತ್ತವೆ. ಈ ಸಮಯದಲ್ಲಿ ಮೇಕೆ ಪಾಲಕರು ಜಾಗೃತರಾಗಿದ್ದು, ಮೇಕೆಗಳಿಗೆ ಗರ್ಭಕಟ್ಟಿಸಲೇ ಬೇಕು. ಗರ್ಭಕಟ್ಟಿಸುವ ಕಾಲ ಮಾರ್ಚ್ ನಿಂದ ಏಪ್ರಿಲ್ ತಿಂಗಳು ಇಲ್ಲವೇ ಜುಲೈನಿಂದ ಆಗಸ್ಟ್ ತಿಂಗಳ ಅಂತ್ಯದವರೆಗೆ. ಈ ಸಮಯದಲ್ಲಿ ಮೇಕೆಗಳಿಗೆ ಗರ್ಭಕಟ್ಟಿಸಿದರೆ ಅವು ಆಗಸ್ಟ್ ನಿಂದ ಸೆಪ್ಟಂಬರ್ ತಿಂಗಳವರೆಗೂ ಹಾಗೂ ಡಿಸೆಂಬರ್‌ನಿಂದ ಜನವರಿ ತಿಂಗಳವರೆಗೂ ಮರಿ ಹಾಕುತ್ತವೆ. ಸಾಮಾನ್ಯವಾಗಿ ಮೇಕೆಗಳು ಆಗಸ್ಟ್ ನಿಂದ ಜನೆವರಿ ತಿಂಗಳವರೆಗೆ ಮರಿ ಹಾಕುವುದೇ ಹೆಚ್ಚು. ವರ್ಷದಲ್ಲಿ ಎರಡು ಸಾರಿ ಮರಿ ಹಾಕುವುದನ್ನು ನಿರೀಕ್ಷಿಸುವುದು ಕಷ್ಟ. ಆದರೆ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಮರಿ ಪಡೆಯಬಹುದು.

ಹೋತ ಸಾಮಾನ್ಯವಾಗಿ ಇಡೀ ಹಿಂಡಿನ ನಾಯಕತ್ವ/ಮುಂದಾಳತ್ವವನ್ನು ವಹಿಸುತ್ತದೆ. ಅಲ್ಲದೇ ಹೋತವನ್ನು ಅರ್ಧ ಹಿಂಡಿಗೆ ಸಮಾನವೆಂದೂ ಹೇಳಬಹುದು. ಯಾವಾಗಲೂ ಶುದ್ದ ತಳಿಯ ಹೋತವನ್ನು ಇಟ್ಟುಕೊಳ್ಳಬೇಕು. ಆದಕಾರಣ ‘ಗರ್ಭಧಾರಣೆಯಲ್ಲಿ ಉಪಯೋಗಿಸುವ ಹೋತದ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಹೋತವು ಸಾಮಾನ್ಯವಾಗಿ 12 ತಿಂಗಳಿಗೆ ಪ್ರಾಯಕ್ಕೆ ಬರುವುದಾದರೂ 18-24 ತಿಂಗಳ ವಯಸ್ಸಿನ ಹೋತವನ್ನು ಸಂತಾನೋತ್ಪತಿ ಕಾರ್ಯಕ್ಕೆ ಉಪಯೋಗಿಸುವುದು ಸೂಕ್ತ. ಹೋತವು ಶೇಷ್ಠ ದರ್ಜೆಯ ತಳಿಯದ್ದಾಗಿದ್ದು ಹಿಂಡಿನಲ್ಲಿನ ಹೆಚ್ಚು ಹೆಣ್ಣು ಮೇಕೆಗಳಲ್ಲಿ ಗರ್ಭಕಟ್ಟಿಸುವ ಸಾಮರ್ಥ್ಯ ಹೊಂದಿರಬೇಕು. ಜನನೇಂದ್ರಿಯವು ಸೊಂಕು ಮುಕ್ತವಾಗಿರಬೇಕು. ಇಂತ ಹೋತವನ್ನು1 1/2 ವರ್ಷ ವಯಸ್ಸಿನಿಂದ 5 ವರ್ಷಗಳ ವಯಸ್ಸಿನವರೆಗೆ ಸಂತಾನೋತ್ಪತ್ತಿಗಾಗಿ ಬಳಸಬಹುದು. ಹುಟ್ಟಿದ ಮರಿಗಳಲ್ಲಿ ಅಂಗವಿಕಲತೆ, ದೋಷಪೂರಿತ ಮರಿಗಳ ಜನನ ಪ್ರಮಾಣ ಹೆಚ್ಚಾಗಿ ಕಂಡು ಬಂದಲ್ಲಿ ಕೂಡಲೇ ಹೋತವನ್ನು ಬದಲಾವಣೆ ಮಾಡುವುದು ಸೂಕ್ತ. ಸಾಮಾನ್ಯವಾಗಿ 25-30 ಹೆಣ್ಣು ಮೇಕೆಗಳಿಗೆ 1 ಹೋತವನ್ನು ಸಂತಾನೋತ್ಪತ್ತಿ ಕಾರ್ಯಕ್ಕಾಗಿ ಬಳಸುವುದು ಸೂಕ್ತ.

ಆಡು/ಮೇಕೆಗಳಲ್ಲಿ ಕೃತಕ ಗಭ೯ಧಾರಣೆಯ ಕುರಿತು ವಿಡಿಯೊ: Artificial Insemination in Sheep and Goats