ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ಆಡುಗಳಿಗೆ ಮೇಯಿಸುವದರ ಮೂಲಕ ಆಹಾರ ನೀಡಲಾಗುತ್ತದೆ. ಅನುಪಯುಕ್ತ ಜಮೀನಿನಲ್ಲಿ, ಬದುಗಳಲ್ಲಿ ಬೆಳೆದ ಮೇವು ಹಾಗೂ ಗಿಡಮರಗಳ ಸೊಪ್ಪನ್ನು ತಿನ್ನುತ್ತವೆ. ವೈಜ್ಞಾನಿಕವಾಗಿ ಆಡುಗಳನ್ನು ಉತ್ಪತ್ತಿಗಾಗಿ ಹಿಂಡಿನಲ್ಲಿ ಸಾಕಿದಾಗ ಮೇಯಿಸುವುದಲ್ಲದೇ ದಾಣಿ ಮಿಶ್ರಣ ಮತ್ತು ಹಸಿರು ಮೇವನ್ನು ಪೂರೈಸಬೇಕಾಗುತ್ತದೆ. ಇದರಿಂದ ಗರಿಷ್ಠ ಉತ್ಪಾದನೆ ಪಡೆಯಲು ಸಹಕಾರಿಯಾಗುತ್ತದೆ.
ಉತ್ತಮ ಆಹಾರ ಮತ್ತು ಪೋಷಣೆಯನ್ನು ಒದಗಿಸಿದರೆ ಅನುವಂಶಿಕವಾಗಿ ಆಡುಗಳಲ್ಲಿ ಅಡಗಿರುವ ಉತ್ಪಾದನಾ ಸಾಮರ್ಥ್ಯವನ್ನು ಗರಿಷ್ಟ ಮಟ್ಟದಲ್ಲಿ ಹೊರ ಹೊಮ್ಮಿಸಬಹುದು. ಆಡುಗಳು ಹಲವಾರು ಮರಗಿಡಗಳ ಸೊಪ್ಪನ್ನು ತಿನ್ನುತ್ತವೆ. ಜೀರ್ಣಶಕ್ತಿಯ ಆಡುಗಳಲ್ಲಿ ಪ್ರಬಲವಾಗಿರುತ್ತದೆ. ಅದ್ದರಿಂದ, ಹೀರಿಕೊಳ್ಳಲ್ಪಟ್ಟ ಆಹಾರಾಂಶಗಳು ಹಾಲು ಇಲ್ಲವೆ ಮಾಂಸವಾಗಿ ಪರಿವರ್ತನೆಯಾಗುತ್ತವೆ. ಹಸುಗಳಿಗೆ ಹೋಲಿಸಿದರೆ, ಆಡುಗಳು ನಿಗದಿತ ಪ್ರಮಾಣದ ಆಹಾರವನ್ನು ಸೇವಿಸಿ ಹೆಚ್ಚು ಹಾಲನ್ನು ಉತ್ಪಾದಿಸುತ್ತವೆ. ಅಲ್ಲದೆ, ತಮ್ಮ ಶರೀರ ನಿರ್ವಹಣೆಗೆ ಕಡಿಮೆ ಪ್ರಮಾಣದ ಶಕ್ತಿಯನ್ನು ಬಳಸಿಕೊಳ್ಳುತ್ತವೆ.
ಆಡುಗಳಲ್ಲಿ ಇತರ ಮೆಲುಕು ಪ್ರಾಣಿಗಳಲ್ಲಿರುವಂತೆ ಹೊಟ್ಟೆ ಅಥವಾ ಉದರವು ಮೆಲಕು ಚೀಲ, ಜಾಲೋದರ, ಪದರೋದರ ಮತ್ತು ನೈಜೋದರ ಎಂಬ ನಾಲ್ಕು ಭಾಗಗಳನ್ನು ಹೊಂದಿರುತ್ತದೆ. ಸೇವಿಸಲ್ಪಟ್ಟ ಆಹಾರವು ಮೇಲಕು ಚೀಲದಲ್ಲಿ ಸೂಕ್ಷಾಣುಜೀವಿಗಳ ಪ್ರಭಾವಕ್ಕೊಳಪಡುತ್ತದೆ. ಮೆಲಕು ಚೀಲದ ಚಲನೆಯು ಆಹಾರವು ಜೀರ್ಣರಸಗಳೊಂದಿಗೆ ಬೆರೆಯಲು ಸಹಕಾರಿಯಾಗುತ್ತದೆ. ತದನಂತರ, ಜಾಲೋದರದ ರಚನೆಯು ಜೇನುಗೂಡಿನಂತಿದ್ದು ಆಹಾರದಲ್ಲಿ ಕಲ್ಮಶಗಳಿದ್ದರೆ ಪ್ರತ್ಯೇಕಿಸಲ್ಪಡುತ್ತವೆ. ಪದರೋದರದಲ್ಲಿ ಆಹಾರದ ದೊಡ್ಡ ಕಣಗಳು ವಿಭನೆಗೊಳ್ಳುತ್ತವೆ. ನೈಜೋದರದಲ್ಲಿ ಆಹಾರವು ಅಮ್ಲಗಳ ಕಿಣ್ವಗಳಿಂದ ಸಂಪೂರ್ಣವಾಗಿ ಜೀರ್ಣಿಸಲ್ಪಡುತ್ತವೆ. ಸಣ್ಣ ಕರುಳಿನಲ್ಲಿ ಕಿಣ್ವಗಳು ಆಹಾರವನ್ನು ಅತೀ ಸಣ್ಣ ಕಣಗಳಾಗಿ ವಿಭಜಿಸಿ ಪೋಷಕಾಂಶಗಳ ಹೀರುವಿಕೆಗೆ ಸಹಕರಿಸುತ್ತವೆ. ದೊಡ್ಡ ಕರುಳಿನಲ್ಲಿ ನೀರಿನ ಅಂಶವು ಹೀರಿಕೊಳ್ಳಲ್ಪಡುತ್ತದೆ. ಸಂಪೂರ್ಣವಾಗಿ ಜೀರ್ಣವಾಗದ ಊಳಿಕೆ ಅಥವಾ ವರ್ಜ್ಯಗಳು ವಿಶಿಷ್ಟ ಆಕಾರದ ರೂಪುಗೊಳ್ಳುತ್ತವೆ.
ಆಡುಗಳ ಮೆಲುಕು ಚೀಲವು ಚಿಕ್ಕದಿರುವ ಕಾರಣ ದಿನಕ್ಕೆ 3-4 ಬಾರಿ ಆಹಾರವನ್ನು ಒದಗಿಸಬೇಕಾಗುತ್ತದೆ. ದಿನವಿಡೀ ಆಹಾರವನ್ನು ಸೇವಿಸುವ ಪ್ರವೃತ್ತಿಯು ಆಡುಗಳದ್ದಾಗಿದೆ. ಮೆಲಕು ಚೀಲದಲ್ಲಿ ಸೂಕ್ಷ್ಮಮಾಣುಜೀವಿಗಳು ತೀರಾ ಸಂಕೀರ್ಣವಾದ ಆಹಾರ ಪದಾರ್ಥಗಳನ್ನು ವಿಭಜಿಸಿ ಸರಳ ಸಾವಯುವ ಪದಾರ್ಥಗಳಾಗಿ ಪರಿವರ್ತಿಸುತ್ತವೆ. ಮೇವು ಮತ್ತು ಆಹಾರ ಮಿಶ್ರಣದಲ್ಲಿರುವ ಶಕ್ತಿಯ ಮಟ್ಟವನ್ನು ಅವುಗಳಲ್ಲಿರುವ ಒಟ್ಟು ಜೀರ್ಣವಾಗುವ ಪೋಷಕಾಂಶಗಳು ಮತ್ತು ಕಚ್ಚಾ ಸಸಾರಜನಕದ ಪ್ರಮಾಣಗಳ ಅಧಾರದ ಮೇಲೆ ಅಳೆಯಲಾಗುತ್ತದೆ. ಆದ್ದರಿಂದ, ಆಡುಗಳಿಗೆ ಪೂರೈಸಿದ ಮೇವು ಮತ್ತು ಆಹಾರದಲ್ಲಿರುವ ಪೋಷಕಾಂಶಗಳ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು.
ಆಡುಗಳ ಆಹಾರದಲ್ಲಿ ನಾರಿನ ಅಂಶವು ಅಧಿಕವಾರಗಿಬೇಕು. ಕೇವಲ ಧಾನ್ಯ ಮಿಶ್ರಣವನ್ನು ನೀಡಿದರೆ ಸೇವನೆಯು ತಗ್ಗುತ್ತದೆ. ಮೆಲಕು ಚೀಲದಲ್ಲಿ ಆಮ್ಲತೆ ಹೆಚ್ಚುತ್ತದೆ. ಹೊಟ್ಟೆಯುಬ್ಬರ ಉಂಟಾಗಬಹುದು. ಉತ್ತಮ ಗುಣಮಟ್ಟದ ಮೇವನ್ನು ಪೂರೈಸಿದರೆ ಸೂಕ್ಷಾö್ಮಣುಜೀವಿಗಳು ಗರಿಷ್ಠ ಪ್ರಮಾಣದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸಿಸುತ್ತವೆ. ಜೀರ್ಣಕ್ರಿಯೆಯು ಚೆನ್ನಾಗಿ ನಡೆದು ಪೋಷಕಾಂಶಗಳು ನಿರೀಕ್ಷಿತ ಪ್ರಮಾಣಗಳಲ್ಲಿ ಹೀರಿಕೊಳ್ಳಲ್ಪಡುತ್ತವೆ. ಆಗ ಮಾತ್ರ ಪ್ರತಿಯೊಂದು ಆಡಿನಲ್ಲಿರುವ ಆನುವಂಶಿಕ ಸಾಮರ್ಥ್ಯಾನುಸಾರ ಹಾಲು ಮತ್ತು ಮಾಂಸದ ಉತ್ಪಾದನೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಆಹಾರದಲ್ಲಿ ಸಸಾರಜನಕಾಂಶವು ಕಡಿಮೆಯಾದರೆ ಆಡುಗಳಲ್ಲಿ ಹಸಿವು ಕಡಿಮೆಯಾಗುತ್ತದೆ. ಮೇವಿನ ಸೇವನೆ ತಗ್ಗುತ್ತದೆ. ಕ್ರಮೇಣ ಆಡುಗಳು ಬಡಕಲಾಗುತ್ತವೆ, ಹಾಲಿನ ಉತ್ಪಾದನೆ ತಗ್ಗುತ್ತದೆ. ಪುನ: ಗರ್ಭ ಧರಿಸದಿರುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಮೇವು ಕಳಪೆಯಾದರೆ ಆಡುಗಳು ಮೇವನ್ನು ತಿನ್ನಲು ಮತ್ತು ಮೆಲಕು ಹಾಕಲು ಹೆಚ್ಚು ಸಮಯವನ್ನು ತೆಗೆದುಕೊಳ್ಳತ್ತವೆ.
ಆಡುಗಳು ವಿವಿಧ ಬಗೆಯ ಗಿಡಗಂಟಿಗಳನ್ನು ತಿಂದು ತನ್ನ ಆಹಾರದ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತವೆ. ಸ್ಥಳೀಯ ಲಭ್ಯತೆ ಆಧಾರದ ಮೇಲೆ ಈ ಕೆಳಕಂಡ ತಪ್ಪಲು / ಕಾಯಿಗಳನ್ನು ಪೂರೈಸಬಹುದು.
ಮೇಕೆಗಳನ್ನು ಮೇಯಿಸುವದರ ಜೊತೆಗೆ ಇವುಗಳನ್ನು ಪ್ರತಿದಿನ ಸುಮಾರು 2-3 ಕೆ.ಜಿ ನೀಡಬಹುದು.
ಆಡು ನೆಲದ ಮೇಲೆ ಮೇಯದೆ ಸ್ವಲ್ಪ ಎತ್ತರದ ಮೇಲೆ ಎಲ್ಲ ತರಹದ ಗಿಡಗಂಟಿಗಳ ಎಲೆಗಳನ್ನು ತಿನ್ನುತ್ತದೆ. ಸಾಧಾರಣವಾಗಿ ಒಂದು ಬಲಿತ ಆಡಿಗೆ 5 ಕಿಲೋ ಮೇವು ಹುಲ್ಲು ಮತ್ತು 0.2 ರಿಂದ 0.7 ಕಿಲೋ ದಾಣಿ ಮಿಶ್ರಣವನ್ನು ಪ್ರತಿನಿತ್ಯ ಕೊಡಬೇಕು.
ಸಾಮಾನ್ಯವಾಗಿ ಆಡು ದ್ವಿದಳ ಮೇವು ಮತ್ತು ಗಿಡ ಕಂಟಿಗಳ ಎಲೆ, ಚಿಗುರು ಮತ್ತು ಕಾಯಿಗಳನ್ನು ತಿನ್ನಲು ಇಷ್ಟಪಡುತ್ತದೆ. ಆದ್ದರಿಂದ ಸಾಮಾನ್ಯವಾಗಿ ದೊರೆಯುವ ಹುಲ್ಲು ಹಾಗೂ ಏಕದಳ ದಾನ್ಯದ ಮೇವುಗಳ ಜೊತೆಯಲ್ಲಿ ಈ ಕೆಳಕಂಡ ದ್ವಿದಳ ಮೇವುಗಳನ್ನು ಬೆಳೆಯಬಹುದು. ಒಂದು ಅಂದಾಜಿನ ಪ್ರಕಾರ ಒಂದು ಏಕರೆ ಜಮೀನಿನಲ್ಲಿ ಸುಮಾರು 20 ಆಡುಗಳಿಗೆ ಸಾಕಾಗುವಷ್ಟು ಮೇವನ್ನು ಬೆಳೆಯಬಹುದಾಗಿದೆ.
ಆಡುಗಳಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಬೇಕಾದ ಪ್ರಮಾಣಗಳಲ್ಲಿ ಮೇವಿನಿಂದಲೇ ಪೂರೈಸಲು ಸಾಧ್ಯವಿಲ್ಲ. ಆದ್ದರಿಂದ, ಸಮತೋಲನ ಆಹಾರ ಧಾನ್ಯ ಮಿಶ್ರಣ ಅಥವಾ ಸಿದ್ಧಾಹಾರ ಮಿಶ್ರಣವನ್ನು ತಯಾರಿಸಿ ಕೊಡಬೇಕಾಗುತ್ತದೆ. ಆಡುಗಳ ಶಾರೀರಿಕ ಬೆಳೆವಣಿಗೆ, ಹಾಲು ಮತ್ತು ಮಾಂಸೋತ್ಪಾದನೆ ಹಾಗೂ ಸಂತಾನೋತ್ಪತ್ತಿ ಕ್ರೀಯೆಗಳಿಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಮೇವು ಮತ್ತು ಸಿದ್ಧಪಡಿಸಿದ ಆಹಾರ ಮಿಶ್ರಣದ ಮೂಲಕ ಒದಗಿಸಬೇಕು. ಈ ರೀತಿ ಸಿದ್ಧಪಡಿಸಿದ ಆಹಾರ ಮಿಶ್ರಣವು ಶಕ್ತಿ ಮತ್ತು ಸಸಾರಜಕವನ್ನು ಪೂರೈಸುವ ಪದಾರ್ಥಗಳು, ಲವಣಾಂಶಗಳು ಮತ್ತು ಜೀವಸತ್ವಗಳನ್ನು ಒಳಗೊಂಡಿರಬೇಕು. ಅವುಗಳ ಆಹಾರವು ಇತರ ಪ್ರಾಣಿಗಳಿಗೆ ಅಗತ್ಯವಿರುವಂತೆಯೇ ಶರ್ಕರಪಿಷ್ಟ, ಸಸಾರಜನಕ, ಕೊಬ್ಬು ಲವಣಗಳು, ಜೀವಸತ್ವಗಳು ಮತ್ತು ನೀರನ್ನು ಒಳಗೊಂಡಿರುತ್ತದೆ.
ಆಹಾರದಲ್ಲಿ ಬಹುಭಾಗವನ್ನು ಆಕ್ರಮಿಸುವ ಶರ್ಕರಪಿಷ್ಟಗಳು ಪ್ರಮುಖವಾಗಿ ಎಲ್ಲಾ ಶಾರಿರೀಕ ಕ್ರಿಯೆಗಳಿಗೆ ಶಕ್ತಿಯನ್ನು ಒದಗಿಸುತ್ತವೆ. ದವಸದಾನ್ಯಗಳು ಮತ್ತು ಗೆಡ್ಡೆಗೆಣಸುಗಳಲ್ಲಿ ಶರ್ಕರಪಿಷ್ಟಗಳು ಅಧಿಕವಾಗಿರುತ್ತವೆ. ಹಸಿರು ಅಥವಾ ಒಣ ಮೇವಿನಲ್ಲಿರುವ ನಾರಿನಂಶವು ಸೂಕ್ಷ್ಮಾಮಣುಜೀವಿಗಳು ಉತ್ಪಾದಿಸುವ ಕಿಣ್ವಗಳ ಪ್ರಭಾವದಿಂದ ಮೇಧೋಆಮ್ಲಗಳಾಗಿ ಪರಿವರ್ತನೆಯಾಗುತ್ತವೆ. ಅಗತ್ಯಕ್ಕಿಂತ ಹೆಚ್ಚು ಶರ್ಕರ ಪಿಷ್ಟಗಳನ್ನು ಸೇವಿಸಿದರೆ ಹೆಚ್ಚುವರಿ ಪ್ರಮಾಣವು ಶರೀರದಲ್ಲಿ ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತದೆ.
ಶರ್ಕರಪಿಷ್ಟದ ಮೂಲ: ಏಕದಳ ಧಾನ್ಯಗಳು: ಜೋಳ, ಮುಸುಕಿನ ಜೋಳ, ಗೋಧಿ, ರಾಗಿ, ನವಣೆ, ಸಜ್ಜೆ ಇತ್ಯಾದಿ.
ಶರೀರದಲ್ಲಿ ಅಂಗಾAಶಗಳ ಬೆಳವಣಿಗೆಗೆ ಸಸಾರಜನಕಾಂಶವು ಅತ್ಯಗತ್ಯವಾಗಿದೆ. ಆದ್ದರಿಂದ, ಬೆಳೆಯುವ ಮರಿಗಳ ಮತ್ತು ಹಾಲುಣಿಸುವ ಆಡುಗಳಿಗೆ ಹೆಚ್ಚು ಸಸಾರಜನಕಾಂಶವು ಬೇಕಾಗುತ್ತದೆ. ವಯಸ್ಸಾದ ಆಡುಗಳಲ್ಲಿ ಜೀವಕೋಶಗಳು ನಾಶವಾಗಿ ನಿರಂತರವಾಗಿ ಹೊಸ ಜೀವಕೋಶಗಳ ಸೃಷ್ಟಿಯಾಗುವುದರಿಂದ ಕನಿಷ್ಠ ಪ್ರಮಾಣದಲ್ಲಿಯಾದರೂ ಅವುಗಳ ಆಹಾರದಲ್ಲಿ ಸಸಾರಜನಕಾಂಶವಿರಬೇಕು. ಜೀರ್ಣಕ್ರಿಯೆಯಲ್ಲಿ ಸಸಾರಜನಕಾಂಶವು ವಿಭಜಿಸಲ್ಪಟ್ಟು ಅಮೈನೋ ಆಮ್ಲಗಳಾಗಿ ರಕ್ತಕ್ಕೆ ಹೀರಿಕೊಳ್ಳಲ್ಪಡುತ್ತವೆ. ಜೀವಕೋಶಗಳು ಈ ಅಮೈನೋ ಆಮ್ಲಗಳನ್ನು ಸಂಯೋಜಿಸಿ ಶರೀರಕ್ಕೆ ಅಗತ್ಯವಾದ ವಿವಿಧ ಸಸಾರಜನಕಗಳನ್ನು ತಯಾರಿಸುತ್ತವೆ. ಎಳೆಯ ಮರಿಗಳ ಮೆಲಕು ಚೀಲವು ಪೂರ್ಣ ಬೆಳೆಯುವವರೆಗೆ ಸಸಾರಜನಕರ ಅವಶ್ಯಕತೆಯನ್ನು ಹಾಲು ಮತ್ತು ಸಿದ್ದ ಆಹಾರ ಮಿಶ್ರಣದಿಂದಲೇ ಒದಗಿಸಬೇಕು.
ಸಸಾರಜನಕದ ಮೂಲ: ಕಡಲೆಕಾಯಿ ಹಿಂಡಿ, ಹತ್ತಿ ಬೀಜದ ಹಿಂಡಿ, ಎಳ್ಳು ಹಿಂಡಿ, ಅಗಸೆ ಹಿಂಡಿ, ಸೂರ್ಯಕಾಂತಿ ಹಿಂಡಿ, ಮುಂತಾದ ಎಣ್ಣೆಕಾಳು ಹಿಂಡಿಗಳು ಮತ್ತು ದ್ವಿದಳ ಧಾನ್ಯಗಳಾದ ಅವರೆ, ಸೋಯಾ ಅವರೆ, ಹುರುಳಿ, ಅಲಸಂದೆ ಇತ್ಯಾದಿ.
ಶರ್ಕರಪಿಷ್ಟ ಮತ್ತು ಸಸಾರಜನಕಕ್ಕಿಂತ ಕೊಬ್ಬು 2.25 ಪಟ್ಟು ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ. ಕೊಬ್ಬು ಶರೀರದಲ್ಲಿ ಶಕ್ತಿಯ ಶೇಖರಣಾ ಸ್ವರೂಪವಾಗಿದೆ. ಕರುಳಿನಲ್ಲಿ ಕೆಲವು ಜೀವಸತ್ವಗಳ ಹೀರುವಿಕೆಗೆ ಕೊಬ್ಬು ಅತ್ಯಗತ್ಯವಾಗಿದೆ. ಆದ್ದರಿಂದ, ಆಡುಗಳ ಆಹಾರದಲ್ಲಿ ಕನಿಷ್ಠ ಪ್ರಮಾಣದಲ್ಲಿಯಾದರೂ ಕೊಬ್ಬಿನಂಶವಿರಬೇಕಾಗುತ್ತದೆ.
ಶರೀರದ ಅಸ್ಥಿಪಂಜರದಲ್ಲಿ ಅಧಿಕವಾಗಿ ಮತ್ತು ಇತರ ಅಂಗಾAಶಗಳಲ್ಲಿ ವಿವಿಧ ಪ್ರಮಾಣದಲ್ಲಿ ಲವಣಾಂಶಗಳು ಶೇಖರಣೆಯಾಗಿರುತ್ತವೆ, ಹಲವು ಶಾರೀರಿಕ ಕ್ರಿಯಗಳಿಗೆ ಸುಮಾರು ೧೪ ಧಾತುಗಳು ಬೇಕು. ಇವುಗಳಲ್ಲಿ ಕ್ಯಾಲ್ಸಿಯಂ, ರಂಜಕ ಸೋಡಿಯಂ, ಪೋಟ್ಯಾಸಿಯಂ, ಕ್ಲೋರಿನ್ ಮತ್ತು ಮೆಗ್ನೀಸಿಯಂ ಅಧೀಕ ಪ್ರಮಾಣದಲ್ಲಿ ಬೇಕಾಗಿದ್ದು, ಪ್ರಮುಖ ಧಾತುಗಳೆಂದು ಗುರುತಿಸಲಾಗಿದೆ. ಕಬ್ಬಿಣ, ಕೋಬಾಲ್ಟ್, ತಾಮ್ರ, ಸತು, ಮ್ಯಾಂಗನೀಸ್, ಮಾಲಿಬ್ಡಿನಂ, ಅಯೋಡಿನ್ ಮತ್ತು ಸೆಲಿನಿಯಂ ಇವುಗಳು ಅತ್ಯಲ್ಪ ಪ್ರಮಾಣಗಳಲ್ಲಿ ಬೇಕಾಗಿದ್ದು, ಆಹಾರದಲ್ಲಿ ಕಡ್ಡಾಯವಾಗಿ ಇರಲೇಬೇಕು. ಇವುಗಳನ್ನು ಲಘು ಧಾತುಗಳೆಂದು ಗುರುತಿಸಲಾಗಿದೆ.
ಶರೀರದ ಸಾಮಾನ್ಯ ಕ್ರೀಯೆಗಳ ನಿರ್ವಹಣೆ ಮತ್ತು ಬೆಳವಣಿಗೆಗೆ ಜೀವಸತ್ವಗಳು ಅತ್ಯವಶ್ಯಕವಾಗಿದೆ. ಇವುಗಳ ಕೊರತೆಯು ತೀವ್ರ ಪರಿಣಾಮಗಳನ್ನು ಬೀರುತ್ತದೆ. ಪ್ರಮುಖ ಜೀವಸತ್ವಗಳೆಂದರೆ ಎ, ಬಿ ಗುಂಪು, ಸಿ, ಡಿ ಮತ್ತು ಕೆ, ಇವುಗಳಲ್ಲಿ ಬಿ ಗುಂಪಿನ ಜೀವಸತ್ವಗಳು ಮತ್ತು ಕೆ ಜೀವಸತ್ವವು ಸೂಕ್ಷಾö್ಮಣು ಜೀವಿಗಳ ಕ್ರಿಯೆಯಿಂದ ಮೆಲಕು ಚೀಲದಲ್ಲಿ ಉತ್ಪಾದನೆಯಾಗುತ್ತವೆ. ಉಳಿದ ಜೀವಸತ್ವಗಳು ಆಹಾರದ ಮೂಲಕ ಪೂರೈಸಬೇಕಾಗುತ್ತದೆ.
ಶರೀರದ ಎಲ್ಲಾ ದ್ರವಗಳಲ್ಲಿ ಮತ್ತು ಅಂಗಾAಶಗಳಲ್ಲಿ ನೀರಿನಂಶವಿರುತ್ತದೆ. ದೇಹದ ತೂಕದ 2/3 ಭಾಗವು ನೀರಿನಂಶವಾಗಿದೆ. ಆಡುಗಳಿಗೆ ಅಗತ್ಯವಿರುವಷ್ಟು ನೀರಿನ ಬಹುತೇಕ ಪ್ರಮಾಣವು ಮೇವಿನಿಂದಲೇ ದೊರೆಯುತ್ತದೆ. ಆದರೂ, ಆಡುಗಳು ತಮಗೆ ಬೇಕೆನಿಸಿದಷ್ಟು ನೀರನ್ನು ಕುಡಿಯಲು ಸ್ವಚ್ಛವಾದ ನೀರಿನ ವ್ಯವಸ್ಥೆ ಮಾಡಬೇಕು. ನೀರು ಆಹಾರವನ್ನು ಆಗಿಯಲು, ನುಂಗಲು, ಜೀರ್ಣಿಸಲು ಮತ್ತು ಆಹಾರಾಂಶಗಳ ಹೀರುವಿಕೆಗೆ ಅಲ್ಲದೆ ರಕ್ತದ ಮೂಲಕ ಪೋಷಕಾಂಶಗಳನ್ನು ವಿವಿಧ ಅಂಗಾಂಶಗಳಿಗೆ ಸಲುಪಿಸಲು ಮತ್ತು ವರ್ಜಿತ ಪದಾರ್ಥಗಳನ್ನು ಶರೀರದಿಂದ ಹೊರಹಾಕಲು ಅವಶ್ಯಕ. ಶರೀರದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹ ನೀರು ಬೇಕು. ನೀರಿನ ಸೇವನೆಯು ದೈಹಿಕ ತೂಕ, ವಾತಾವರಣದ ಉಷ್ಣತೆ ಮತ್ತು ಆಹಾರದ ಪ್ರಕಾರವನ್ನು ಅವಲಂಬಿಸಿರುತ್ತದೆ. ಪ್ರತಿ ದಿನ ಆಡೊಂದಕ್ಕೆ 6 ರಿಂದ 8 ಲೀ ನೀರು ಬೇಕಾಗುತ್ತದೆ. ಬೇಸಿಗೆಯಲ್ಲಿ 12 ಲೀ. ನೀರು ಬೇಕಾಗುತ್ತದೆ.
ಕೆಲವು ಕೃಷಿ ಕೃಗಾರಿಕಾ ಉಪೋತ್ಪನ್ನಗಳಾದ ಅಕ್ಕಿ ತೌಡು, ಗೋಧಿ ಬೂಸ, ಮೇನಿನ ಪುಡಿ, ಕಡಲೆ, ಹೆಸರು ಮತ್ತು ಉದ್ದಿನ ಕಾಳುಗಳ ಹೊಟ್ಟು ಸಸಾರಜನಕ ಮತ್ತು ಶರ್ಕರಪಿಷ್ಟಗಳನ್ನು ಮಧ್ಯಮ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಈ ರೀತಿ ತಿಂಡಿ ಮಿಶ್ರಣವನ್ನು ರೈತರೇ ಬೆಳೆಯುವ ಆಹಾರ ಧಾನ್ಯಗಳಿಂದ ಕೋಷ್ಟಕದಲ್ಲಿ ತಿಳಿಸಿರುವಂತೆ ತಯಾರಿಸಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ.
| ಆಹಾರ ಪದಾರ್ಥಗಳು | ಪ್ರಮಾಣ (ಶೇ.) |
|---|---|
| ನುಚ್ಚು ಮಾಡಿದ ಏಕದಳ ಧಾನ್ಯಗಳು | 30-40 |
| ಎಣ್ಣೆಕಾಳಿನ ಹಿಂಡಿಗಳು | 20-30 |
| ತೌಡು | 30-40 |
| ಲವಣ ಮಿಶ್ರಣ | 01-02 |
ಸ್ಥಳಿಯವಾಗಿ ದೊರೆಯುವ ಅಸಂಪ್ರದಾಯಿಕ ಪದಾರ್ಥಗಳನ್ನು ಸಂಸ್ಕರಿಸಿ ಪಶು ಆಹಾರದಲ್ಲಿ ಬೆರೆಸಿ ಉಪಯೋಗಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನಾದಾರಿತ ಸಲಹೆ ಮತ್ತು ಸೂಚನೆಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.