ವೆಚ್ಚವು ಸ್ಥಾನೀಯವಾಗಿ ಬದಲಾವಣೆಯಾಗುವುದರಿಂದ ಅಂದಾಜು ಆದಾಯ ಮತ್ತು ವೆಚ್ಚವನ್ನು ಕಂಡುಹಿಡಿಯಬಹುದು. ಯಾವುದೇ ರೀತಿಯ ಸಾಲವನ್ನು ತೆಗೆದುಕೊಳ್ಳದೇ ಸ್ವಂತ ಹಣದ ಹೂಡಿಕೆ ಮಾಡುವುದು ಯಾವಾಗಲೂ ಅತ್ಯುತ್ತಮ.
| ವಿವರ |
ಆಯವ್ಯಯಗಳ ನೋಟ |
| ಅ) ಅವರ್ತಕ ಖರ್ಚು |
|
| 1. |
ಕೊಟ್ಟಿಗೆ ನಿರ್ಮಾಣ (ಸ್ಥಳೀಯ ವಸ್ತುಗಳಿಂದ ನಿರ್ಮಿಸುವುದು ಸೂಕ್ತ) |
| 2. |
ಸಂಗ್ರಹ ಕೊಠಡಿ ಹಾಗೂ ಕೂಲಿ ಕಾರ್ಮಿಕರ ಕೊಠಡಿ |
| 3. |
ಮೇವು ಕತ್ತರಿಸುವ ಯಂತ್ರ |
| 4. |
ಹೈನುರಾಸುಗಳ ಖರೀದಿ |
| 5. |
ಜೀವ ವಿಮೆ |
| 6. |
ನೀರಿನ ವ್ಯವಸ್ಥೆ |
| ಬ) ಪುನರಾವರ್ತಕ ಖರ್ಚು |
|
| 1. |
ಹಸಿರು ಮೇವು ಉತ್ಪಾದನೆ |
| 2. |
ಒಣ ಮೇವು |
| 3. |
ಪೌಷ್ಠಿಕ ಆಹಾರ/ ಸಮತೋಲನ ಆಹಾರ/ ದಾಣಿ ಮಿಶ್ರಣ (ಮನೆಯಲ್ಲಿ ತಯಾರಿಸುವುದು ಸೂಕ್ತ) |
| 4. |
ಔಷಧ ವೆಚ್ಚ |
| 5. |
ಕೂಲಿ ಕಾರ್ಮಿಕರ ವೆಚ್ಚ (ಕುಟುಂಬ ಸದಸ್ಯರಿಂದಲೇ ನಿರ್ವಹಣೆ ಸೂಕ್ತವಾದದ್ದು) |
| 6. |
ಕೊಟ್ಟಿಗೆ ಮೇಲೆ ಸವಕಳಿ |
| 7. |
ಉಪಕರಣಗಳ ಮೇಲೆ ಸವಕಳಿ |
| 8. |
ಸಾಲದ ಮೇಲೆ ಬಡ್ಡಿ |
| ಕ) ಆದಾಯ |
|
| 1. |
ಹಾಲು ಮಾರಾಟ (ಸಾಧ್ಯವಿದ್ದರೆ) |
| 2. |
ಗೊಬ್ಬರ ಮಾರಾಟ |
| 3. |
ಗೋಣಿ ಚೀಲಗಳ ಮಾರಾಟ |
| 4. |
ಕರುಗಳ ಮಾರಾಟ (ಅವಶ್ಯಕತೆಯಿದ್ದರೆ) |
| ನಿವ್ವಳ ಲಾಭ = ಒಟ್ಟು ಆದಾಯ - ಪುನರಾವರ್ತಕ ಖರ್ಚು |
ವಿವಿಧ ರೀತಿಯ ಯೋಜನೆಗಳನ್ನು ತಯಾರಿಸಲು ಈ ಕೆಳಗೆ ಪಟ್ಟಿದಂತೆ ಮಾಹಿತಿಯನ್ನು ಪಡೆಯಬಹುದಾಗಿದೆ.
ಹಾಲಿನ ಉತ್ಪನ್ನಗಳು
ಹಾಲಿನ ಉತ್ಪನ್ನಗಳನ್ನು ತಯಾರಿಸುವ ಮುಖ್ಯ ಉದ್ದೇಶವೆಂದರೆ, ಆದಷ್ಟು ಹೆಚ್ಚು ದಿನ ಹಾಲನ್ನು ಶೇಖರಣೆ ಮಾಡುವುದು.
ಹಾಲಿನ ಉತ್ಪನ್ನಗಳು ಸಹ ಹಾಲಿನಂತೆಯೇ ದೇಹದ ಬೆಳವಣಿಗೆಗೆ ಅವಶ್ಯವಿರುವ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ.
ಗ್ರಾಮೀಣ ಪ್ರದೇಶದಲ್ಲಿ ತಯಾರಿಸಿ, ಮಾರಾಟ ಮಾಡುವಂತಹ ಅತೀ ಮುಖ್ಯವಾದ ಹಾಲಿನ ಉತ್ಪನ್ನಗಳೆಂದರೆ,
ಖವಾ/ಖೋವಾ, ಚನ್ನಾ ಅಥವಾ ಪನೀರ್, ಕುಲ್ಪಿ/ಐಸ್ ಕ್ರೀಂ, ಶ್ರೀಖಂಡ ಇತ್ಯಾದಿ.
-
ಖವಾ/ಖೋವಾ:
ಈ ಹಾಲಿನ ಉತ್ಪನ್ನವನ್ನು ಅತೀ ಸುಲಭವಾಗಿ, ಕಡಿಮೆ ಖರ್ಚಿನಿಂದ ಗ್ರಾಮೀಣ ಪ್ರದೇಶದಲ್ಲಿ ತಯಾರಿಸಿ ಮಾರಾಟ ಮಾಡಬಹುದು.
ಇದನ್ನು ಮುಖ್ಯವಾಗಿ ಬೇರೆ ಬೇರೆ ಸಿಹಿ ತಿಂಡಿಗಳಾದ ಪೇಡ, ಬರ್ಫಿ, ಗುಲಾಬಜಾಮೂನ ಮುಂತಾದವುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
-
ಚನ್ನಾ ಅಥವಾ ಪನೀರ್:
ಇದು ಕೂಡ ಗ್ರಾಮೀಣ ಪ್ರದೇಶದಲ್ಲಿ ಸುಲಭ ರೀತಿಯಿಂದ ತಯಾರಿಸಿ, ರೈತರು ಮಾರಾಟ ಮಾಡಬಹುದಾದಂತಹ ಹಾಲಿನ ಉತ್ಪನ್ನ.
ಚನ್ನಾ ಅಥವಾ ಪನೀರ್ ಎಂದರೆ ಹಾಲನ್ನು ಕುದಿಸಿ, ನಂತರ ಆಮ್ಲವನ್ನು ಬೆರೆಸಿ ಹಾಲನ್ನು ಒಡೆದು ತಯಾರಿಸುವ ಒಂದು ಮುಖ್ಯವಾದ ಪದಾರ್ಥ.
ಇದನ್ನು ಹೆಚ್ಚಾಗಿ ರಸಗುಲ್ಲ, ಸಂದೇಶ ಮುಂತಾದವುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
-
ಕುಲ್ಫಿ ಅಥವಾ ದೇಸಿ ಐಸ್ ಕ್ರೀಂ :
ಕುಲ್ಫಿ ಕೂಡ ದೇಸೀಯ ಐಸ್ ಕ್ರೀಂ ಎಂದು ಕರೆಯಲ್ಪಡುವ ಒಂದು ಹಾಲಿನ ಉತ್ಪನ್ನವಾಗಿದೆ.
ಇದು ಶೈತೀಕರಿಸಿದ ಹಾಲಿನ ಉತ್ಪನ್ನವಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ತಯಾರಿಸಿ, ಸುಲಭವಾಗಿ ಮಾರಾಟ ಮಾಡಬಹುದು.
-
ಶ್ರೀಖಂಡ:
ಇದೊಂದು ಮುಖ್ಯವಾದ ಬುರುಗುವಿಕೆಯ ವಿಧಾನದಿಂದ ತಯಾರಿಸಲ್ಪಡುವಂತಹ ಹಾಲಿನ ಉತ್ಪನ್ನ,
ಹಾಲನ್ನು ಹೆಪ್ಪು ಹಾಕಿ ಮೊದಲು ಮೊಸರು ಮಾಡಬೇಕು. ಹೀಗೆ ತಯಾರಿಸಿದ ಮೊಸರಿನಲ್ಲಿಯ ಅರ್ಧದಷ್ಟು ನೀರನ್ನು (ವ್ಹೇ)
ಮಸ್ಲಿನ್ ಬಟ್ಟೆಯಿಂದ ಬಸಿಯಬೇಕು. ಹೀಗೆ ನೀರನ್ನು ಬಸಿದು ಉಳಿದ ಗಟ್ಟಿಯಾದ ಪದಾರ್ಥಕ್ಕೆ “ಚಕ್ಕಾ” ಎಂದು ಕರೆಯುತ್ತಾರೆ.
ಈ ಚಕ್ಕಾಕ್ಕೆ ಸುಮಾರು 41 % ಸಕ್ಕರೆಯನ್ನು ಸೇರಿಸಿ ಸರಿಯಾಗಿ ನಾದಿ ಮಿಶ್ರಣ ಮಾಡಬೇಕು.
ಇದಕ್ಕೆ ಬೇಕಾದಲ್ಲಿ ಗೋಡಂಬಿ ಹಾಗೂ ವನಿಲ್ಲಾ, ಪಿಸ್ತಾ, ಬದಾಮ, ಸ್ಟಾçಬೇರಿ ಅಥವಾ ಮಾವಿನ ಸುವಾಸನೆಯನ್ನು ಸೇರಿಸಬಹುದು.
ಇದನ್ನು ತಂಪಾದ ಸ್ಥಳದಲ್ಲಿ ಶೇಖರಣೆ ಮಾಡಿದಲ್ಲಿ ಹೆಚ್ಚಿನ ದಿನ ಇಟ್ಟು ಮಾರಾಟ ಮಾಡಬಹುದು.
ಜಾನುವಾರುಗಳ ಗಂಜಲ ಮತ್ತು ಸಗಣಿಯಿಂದ ತಯಾರಿಸುವ ಉತ್ಪನ್ನಗಳು
- ಕಾಂಪೋಸ್ಟ ಗೊಬ್ಬರ
- ಎರೆಹುಳು ಗೊಬ್ಬರ
- ಬೀಜಾಮೃತ
- ಜೀವಾಮೃತ
- ಪಂಚಗವ್ಯ
ಇತ್ತೀಚಿನ ದಿನಗಳಲ್ಲಿ ಹೊಸ ಪದ್ದತಿಯ ಜೈವಿಕ ಅನೀಲ (ಗೋಬರ ಗ್ಯಾಸ) ಘಟಕಗಳನ್ನು ಕಡಿಮೆ ಖರ್ಚಿನಲ್ಲಿ ಸ್ಥಾಪಿಸಿಕೊಂಡು ಬಳಸಬಹುದು. ಇದರಿಂದ ವರ್ಷಪೂರ್ತಿ ಅಡುಗೆ ಇಂಧನವನ್ನು ಪಡೆಯಬಹುದು.
ಮಾರುಕಟ್ಟೆ
ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಸಹಕಾರ ಸಂಘಗಳು ಗ್ರಾಮೀಣ ಮಟ್ಟದಲ್ಲಿ ಹಾಲಿಗೆ ವ್ಯವಸ್ಥಿತ ಮಾರುಕಟ್ಟೆಯನ್ನು ಕಲ್ಪಿಸಿವೆ.
ಈ ಸೌಲಭ್ಯ ಇಲ್ಲದ ರೈತರು ಮತ್ತು ಪಟ್ಟಣಕ್ಕೆ ಹತ್ತಿರವಿರುವ ರೈತರು ಸ್ಥಳೀಯವಾಗಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೋಟೆಲುಗಳಿಗೆ,
ವಸತಿ ನಿಲಯಗಳಿಗೆ ಮತ್ತು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವುದರಿಂದ ಲಾಭಾಂಶ ಹೆಚ್ಚ್ಚಾಗುತ್ತದೆ.
ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರ, ಚನ್ನಾ ಮುಂತಾದವುಗಳನ್ನು ಬೇಡಿಕೆಗಳಿಗೆ ಅನುಗುಣವಾಗಿ ತಯಾರಿಸಿ ಮಾರಾಟ ಮಾಡಿದರೆ
ಲಾಭಾಂಶದಲ್ಲಿ ಹೆಚ್ಚಳವಾಗುತ್ತದೆ.
ಹಾಲು ಉತ್ಪಾದಕ ಘಟಕ :
ಒಂದು ಹಾಲು ಉತ್ಪಾದಕ ಘಟಕ (ಡೈರಿ ಫಾರ್ಮ)ವನ್ನು ಹಸುಗಳಿಂದ ಅಥವಾ ಎಮ್ಮೆಗಳಿಂದ ಪ್ರಾರಂಭಿಸಬಹುದು.
ಮಿಶ್ರತಳಿ ಹಸುಗಳು ಹೆಚ್ಚಿಗೆ ಹಾಲು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ.
ಆಯಾ ಪ್ರದೇಶದ ಹವಾಮಾನ ಪರಿಸ್ಥಿತಿ, ಹಾಲಿಗಿರುವ ಮಾರುಕಟ್ಟೆ ಬೇಡಿಕೆ,
ಸಾಕಷ್ಟು ಪ್ರಮಾಣದಲ್ಲಿ ಮೇವಿನ ಪದಾರ್ಥ ದೊರೆಯುವಿಕೆ ಇತ್ಯಾದಿಗಳ ಆಧಾರದ ಮೇಲೆ
ಎಮ್ಮೆ, ಮಿಶ್ರತಳಿ ಹಸು ಅಥವಾ ದೇಶೀಯ ಹಸುಗಳ ಘಟಕವನ್ನು ಸ್ಥಾಪಿಸಬಹುದು.
ತಂಪು ವಾಯುಗುಣದ, ಸಾಕಷ್ಟು ಹಸಿರು ಮೇವು ಇರುವ ಮತ್ತು ಹಾಲಿಗೆ ಹೆಚ್ಚಿನ ಬೇಡಿಕೆ ಇರುವಲ್ಲಿ
ಮಿಶ್ರತಳಿ ಹಸುಗಳನ್ನು ಸಾಕಬಹುದು.
ಉಳಿದ ಸಂದರ್ಭಗಳಲ್ಲಿ ಎಮ್ಮೆ ಅಥವಾ ದೇಶೀಯ ಹಸುಗಳನ್ನು ಸಾಕಬಹುದು.
ಎಲ್ಲಾ ಹೈನು ರಾಸುಗಳು ಏಕಕಾಲದಲ್ಲಿ ಹಾಲು ಉತ್ಪಾದಿಸಿ ನಂತರ ಏಕಕಾಲಕ್ಕೆ ನಿಲ್ಲಿಸುವುದನ್ನು ತಪ್ಪಿಸಲು
ಇವುಗಳನ್ನು 2-3 ತಿಂಗಳ ಅಂತರದಲ್ಲಿ ಎರಡು ಗುಂಪುಗಳಲ್ಲಿ ಖರೀದಿಸಬೇಕು.
ಹೈನು ರಾಸುಗಳನ್ನು ಖರೀದಿಸುವಾಗ ಕೆಳಗಿನ ಅಂಶಗಳನ್ನು ಗಮನಿಸಬೇಕು.
ಹೈನುಗಾರಿಕೆಯಲ್ಲಿ ಖರ್ಚು ಕಡಿಮೆ ಮಾಡಿ ಲಾಭಾಂಶ ಹೆಚ್ಚು ಮಾಡುವ ಸೂತ್ರಗಳು
ಹೈನುಗಾರಿಕೆಯಲ್ಲಿ ಈ ಕೆಳಗಿನ ಸೂತ್ರಗಳನ್ನು ಅನುಸರಿಸಿದರೆ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಗೆ ಮಾಡಲು ಸಾಧ್ಯವಿದೆ.
- ಪಶುಗಳನ್ನು ಆಯ್ಕೆ ಮಾಡುವಾಗ ಆದಷ್ಟು ಕಡಿಮೆ ವಯಸ್ಸಿನ (5-6 ವರ್ಷದೊಳಗಿನವು), ಆರೋಗ್ಯವಂತ ಹಾಗೂ ಹೆಚ್ಚಿಗೆ ಹಾಲು ಹಿಂಡುವ ದನಗಳನ್ನು ಖರೀದಿಸಿ ಅವುಗಳ ಉತ್ಪಾದನಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
- ಪಶುಗಳಿಗೆ ಕೊಟ್ಟಿಗೆಯನ್ನು ಆದಷ್ಟು ಸ್ಥಳೀಯವಾಗಿ ಸಿಗುವ ಕಚ್ಚಾ ಪದಾರ್ಥಗಳನ್ನು ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ಕಟ್ಟಬೇಕು.
- ಪಶುಗಳಿಗೆ ಮೇವನ್ನು ಕೊಂಡು ಮೇಯಿಸುವ ಬದಲು ಸ್ವಂತ ಬೆಳೆದು ಮೇಯಿಸಿದರೆ ಖರ್ಚು ಕಡಿಮೆ ಬರುವುದು.
- ಹಸಿರು ಮೇವಿನಲ್ಲಿ 2/3 ಏಕದಳ ಮೇವು (ಗೋವಿನ ಜೋಳ/ಜೋಳ) ಮತ್ತು 1/3 ದ್ವೀದಳ ಮೇವು (ಕುದುರೆ ಮೆಂತೆ/ಅಲಸಂದಿ/ ಹುರುಳಿ) ಪ್ರಮಾಣದಲ್ಲಿ ಬೆಳೆದು ಸಣ್ಣದಾಗಿ ಒಂದರಿಂದ ಎರಡು ಅಂಗಲ ಉದ್ದ ತುಂಡರಿಸಿ ಪಶುಗಳಿಗೆ ಮೇಯಿಸಿದರೆ ದಾಣಿ ಮಿಶ್ರಣ ತಿನ್ನಿಸುವ ಪ್ರಮಾಣವನ್ನು ಶೇ.50 ರಷ್ಟು ಕಡಿಮೆ ಮಾಡಿ ಹೆಚ್ಚು ಹಾಲಿನ ಉತ್ಪಾದನೆಯನ್ನು ಕಡಿಮೆ ವೆಚ್ಚದಲ್ಲಿ ಪಡೆಯಬಹುದು.
- ಮಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಹಸಿರು ಮೇವನ್ನು ರಸಮೇವಾಗಿ ಸಂಗ್ರಹಿಸಿಕೊಂಡರೆ ಹಸಿರು ಮೇವು ಸಿಗದೆ ಇದ್ದಾಗ ಅದನ್ನು ಮೇಯಿಸಿ, ಅಂದರೆ ಬೇಸಿಗೆಯಲ್ಲೂ ಕೂಡ ಹೆಚ್ಚಿನ ಹಾಲಿನ ಉತ್ಪಾದನೆ ಪಡೆದು ಲಾಭ ಹೆಚ್ಚಿಸಬಹುದು.
- ದಾಣಿ ಮಿಶ್ರಣವನ್ನು ಸ್ವಂತ ತಯಾರಿಸಿ ತಿನ್ನಿಸುವಾಗ ಅದರ ಗುಣಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ದಾಣಿ ಮಿಶ್ರಣದ ಕಚ್ಚಾ ಪದಾರ್ಥಗಳನ್ನು ಆದಷ್ಟು ಸುಗ್ಗಿಯ ಕಾಲದಲ್ಲಿ ಕಡಿಮೆ ಬೆಲೆಗೆ ಸಿಗುವಾಗ ಸಾಕಷ್ಟು ಪ್ರಮಾಣದಲ್ಲಿ ಖರೀದಿಸಿ ಶೇಖರಿಸಿಟ್ಟುಕೊಳ್ಳುವುದು ಉತ್ತಮ.
- ಕರುಗಳಿಗೆ ಸರಿಯಾಗಿ ಗಿಣ್ಣದ ಹಾಲನ್ನು ಕುಡಿಸಿ, ಪೋಷಿಸಿ ಮುಂದೆ ಮಣಕಗಳು ಆದಷ್ಟು ಬೇಗನೆ 1 1/2 ಯಿಂದ 2 ವರ್ಷದೊಳಗೆ ಬೆದೆಗೆ ಬಂದು ಗರ್ಭಧರಿಸುವ ಹಾಗೆ ಪೋಷಿಸಬೇಕು.
- ಜಾನುವಾರುಗಳ ಕರಾವಿನ (2 ಸೂಲುಗಳ ನಡುವಿನ) ಅಂತರವನ್ನು ಆದಷ್ಟು ಕಡಿಮೆ (12-14 ತಿಂಗಳೊಳಗೆ) ಮಾಡಿದರೆ ವರ್ಷಕ್ಕೊಂದು ಕರು ಹಾಗೂ ಹೆಚ್ಚಿನ ಹಾಲನ್ನು ಪಡೆಯಬಹುದು.
- ಹೆಚ್ಚಿಗೆ ಹಾಲು ಹಿಂಡುವ ಆಕಳುಗಳು ಆದಷ್ಟು ಮೇ-ಜೂನ್ ತಿಂಗಳಲ್ಲಿ ಕರು ಹಾಕುವ ಹಾಗೆ ಏರ್ಪಾಟು ಮಾಡಿದರೆ ಮುಂದೆ ಮಳೆಗಾಲದಲ್ಲಿ ಹೆಚ್ಚಿಗೆ ಹಸಿರು ಮೇಯ್ದು ಹೆಚ್ಚಿನ ಹಾಲು ಉತ್ಪಾದಿಸುತ್ತವೆ.
- ಕಡಿಮೆ ಉತ್ಪಾದಿಸುವ, ಸರಿಯಾಗಿ ಬೆದೆಗೆ ಬಾರದ ಹಾಗೂ ಗರ್ಭಧರಿಸದ, ಬೆಳವಣಿಗೆ ಕುಂಠಿತವಾಗಿರುವ, ಅನಾರೋಗ್ಯದ ಹಾಗೂ ಹೆಚ್ಚಿಗೆ ಇರುವ ಪಶುಗಳನ್ನು ಮಾರಿದರೇ, ಅವುಗಳನ್ನು ಮೇಯಿಸುವ ಮತ್ತು ನಿರ್ವಹಿಸುವ ಖರ್ಚನ್ನು ಉಳಿಸಬಹುದು.
- ಜಾನುವಾರುಗಳ ಆರೋಗ್ಯದ ಮುಂಜಾಗ್ರತೆ ಕ್ರಮಗಳಾದ ಚುಚ್ಚುಮದ್ದು ಹಾಕಿಸುವದು ಮತ್ತು ಜಂತು ಹಾಗೂ ಉಣ್ಣೆಗಳನ್ನು ನಿಯಂತ್ರಿಸುವದನ್ನು ಸರಿಯಾಗಿ ಅನುಸರಿಸಿದರೆ ಅವು ಸಾಯುವ ಪ್ರಮಾಣವನ್ನು ತಗ್ಗಿಸಿ, ಮುಂದೆ ಆಗಬಹುದಾದ ಔಷಧಿ ಖರ್ಚನ್ನು ಉಳಿಸಲು ಸಾಧ್ಯ ಇದೆ.
- ಪಶುಗಳಿಗೆ ಜೀವವಿಮೆ ಮಾಡಿಸುವುದರಿಂದ ಆಕಸ್ಮಾತ ಅವು ಸತ್ತರೆ ಹಾನಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿದಂತಾಗುತ್ತದೆ.
- ಪಶುಗಳ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುವ ಹಾಗೆ ವ್ಯವಸ್ಥೆ ಮಾಡಿದರೆ ಲಾಭ ಹೆಚ್ಚಿಗೆ ಬರುತ್ತದೆ.
- ಬೇಸಿಗೆಯಲ್ಲಿ ಪಶುಗಳನ್ನು ಆದಷ್ಟು ತಂಪಾಗಿಟ್ಟು ಮೇಲಿಂದ ಮೇಲೆ ಮೈಮೇಲೆ ನೀರು ಹಾಕಿ ಸಾಕಷ್ಟು ಪ್ರಮಾಣದ ನೀರು ಕುಡಿಸಬೇಕು. ತಂಪುಹೊತ್ತಿನಲ್ಲಿ ಮೇಯಿಸಿದರೆ ಹೆಚ್ಚಿನ ಉತ್ಪಾದನೆ ಪಡೆದು ಲಾಭ ಹೆಚ್ಚಾಗುತ್ತದೆ.
- ಮನೆಯವರೆಲ್ಲರೂ ಪಶುಗಳ ಪಾಲನೆಯಲ್ಲಿ ದುಡಿದರೆ ಆಳುಗಳನ್ನು ಕಡಿಮೆ ಇಟ್ಟು, ಅವರನ್ನು ಸಮರ್ಥವಾಗಿ ದುಡಿಸಿದರೆ ಖರ್ಚು ಕಡಿಮೆ ಬರುತ್ತದೆ.
- ಸಗಣಿಯಿಂದ ಅನಿಲವನ್ನು ಉತ್ಪಾದಿಸಿ ಅದನ್ನು ರಾತ್ರಿ ಬೆಳಕಿನ ಸಲುವಾಗಿ ಮತ್ತೆ ಇತರೆ ಕೆಲಸಗಳಿಗೆ ಉಪಯೋಗಿಸಿದರೆ ವಿದ್ಯುಚ್ಛಕ್ತಿ ಖರ್ಚನ್ನು ಉಳಿಸಬಹುದು ಮತ್ತು ಎರೆಹುಳು ಗೊಬ್ಬರ ತಯಾರಿಸಿ ಮಾರಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ.
ಈ ರೀತಿ ಪಶುಗಳನ್ನು ಸರಿಯಾಗಿ ಪೋಷಿಸಿ, ಪಾಲನೆ ಮಾಡಿ, ಪ್ರತಿಯೊಂದರಿಂದ ಒಂದೂವರೆ ವರ್ಷಕ್ಕೊಂದು ಕರುವನ್ನು ಪಡೆದು,
ಆರೋಗ್ಯ ರಕ್ಷಿಸಿ ಹೆಚ್ಚಿನ ಉತ್ಪಾದನೆ ಪಡೆದಲ್ಲಿ ಖರ್ಚು ಕಡಿಮೆಯಾಗಿ ಲಾಭಾಂಶ ಹೆಚ್ಚಿಗೆಯಾಗುವುದರಲ್ಲಿ ಸಂದೇಹವಿಲ್ಲ.