ಬೆದೆ ಎಂದರೇನು?
ಋತು ಚಕ್ರದ ಒಂದು ಭಾಗವಾದ “ಬೆದೆ”ಯು ಹಸುಗಳು/ಎಮ್ಮೆಗಳು ಹೋರಿಯ/ಕೋಣದ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸುವ ಅವಧಿಯಾಗಿರುತ್ತದೆ. ಇದು ಸಾಮಾನ್ಯವಾಗಿ 12-24 ಗಂಟೆಗಳ ವರೆಗೆ ಮಾತ್ರ ಇರುತ್ತದೆ. ಇದನ್ನು ಪುನಃ ಮೂರು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ, ಮುಂಬೆದೆ (6-8 ಗಂಟೆಗಳು), ಮಧ್ಯ ಬೆದೆ (8-16 ಗಂಟೆಗಳು) ಹಾಗೂ ಹಿಂಬೆದೆ (16-24 ಗಂಟೆಗಳು). ಈ ಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸುವುದು ಕ್ಲಿಸ್ಟಕರ. ಇವುಗಳಲ್ಲಿ ಮಧ್ಯ ಬೆದೆ ಗರ್ಭಧಾರಣೆಗೆ ಸೂಕ್ತವಾದ ಸಮಯವಾಗಿರುತ್ತದೆ. ಈ ಬೆದೆಯಲ್ಲಿ ಗರ್ಭಧರಿಸಿದರೆ ಲೈಂಗಿಕ ಚಕ್ರದ ಅಂತಿಮ ಬೆದೆಯು ಗರ್ಭದ ಅವಧಿ ಮುಗಿಯುವವರೆಗೆ ಮುಂದುವರೆಯುತ್ತದೆ. ಒಂದು ಪಕ್ಷ ಗರ್ಭಧರಿಸದಿದ್ದರೆ ಅಂತಿಮ ಬೆದೆಯ ಕೊನೆಯ ಭಾಗದಲ್ಲಿ ಪುನಃ ಪೂರ್ವ ಬೆದೆಯು ಕಾಲಚಕ್ರದಂತೆ ಪ್ರಾರಂಭಗೊಂಡು ಮುಂದಿನ ಋತುಚಕ್ರವು ಆರಂಭವಾಗುವುದು.
ಹೈನು ಉದ್ಯಮ ಯಶಸ್ವಿಯಾಗಬೇಕಾದರೆ ಪ್ರತಿ ಹೈನುರಾಸು 12 ರಿಂದ 14 ತಿಂಗಳೊಳಗೆ ಮತ್ತೆ ಕರು ಹಾಕುವಂತೆ ಮಾಡುವದು ಬಹಳ ಮುಖ್ಯವಾದ ವಿಷಯವಾಗಿದೆ. ಎಲ್ಲಾ ರಾಸುಗಳಿಗೆ ಅದು ಕರು ಹಾಕಿದ 90 ದಿನಗಳೊಳಗೆ ಯಶಸ್ವಿಯಾಗಿ ಗರ್ಭಧಾರಣೆ ಮಾಡಿಸತಕ್ಕದ್ದು. ಗರ್ಭಧಾರಣೆಯಾಗುವುದನ್ನು ತಿಳಿಯಲು ಹಸುಗಳನ್ನು ಕೃತಕ ಗರ್ಭಧಾರಣೆಯ ಪ್ರಯೋಗ ಮಾಡಿದ 60 ದಿನಗಳ ತರುವಾಯ ಪಶುವೈದ್ಯರಿಂದ ಪರೀಕ್ಷೆ ಮಾಡಿಸಬೇಕು.
ಲಕ್ಷಣಗಳಿಂದ ಬೆದೆ ಗುರುತಿಸುವಿಕೆ
ಅ. ಮುಂಬೆದೆ:
- ಬೆದೆಗೆ ಬಂದ ಜಾನುವಾರು ಬೇರೆ ದನಗಳ ಜನನೇಂದ್ರಿಯವನ್ನು ಮೂಸುವುದು,
- ಬೇರೆ ಜಾನುವಾರುಗಳ ಮೇಲೆ ಹಾರಲು ಪ್ರಯತ್ನಿಸುವುದು,
- ಒದರುವುದು/ಕೂಗುವುದು,
- ಮೇವು ಹಾಗೂ ನೀರು ಸೇವನೆಯಲ್ಲಿ ನಿರಾಸಕ್ತಿ ತೋರುವುದು,
- ಬೆದರಿದಂತೆ ಕಾಣುವುದು,
- ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು
- ಹಾಲಿನ ಉತ್ಪಾದನೆಯಲ್ಲಿ ಕುಂಠಿತ
- ಯೋನಿ ಕೆಂಪಗಾಗಿರುವುದು ಮತ್ತು ಯೋನಿ ದ್ವಾರದಿಂದ ತೆಳುವಾದ ಹಾಗೂ ಹೇರಳವಾದ ಲೋಳೆ (ಕೊಳವೆ ಅಥವಾ ಮಲಾಷ್ಟ) ಬೀಳುವುದು.
ಆ. ಮಧ್ಯ ಬೆದೆ:
- ಯೋನಿ ದ್ವಾರದ ತುಟಿಗಳು ಊದಿಕೊಂಡಿರುತ್ತವೆ.
- ಬಾಲವನ್ನು ಎತ್ತಿ ಹಿಡಿಯುವುದು,
- ಯೋನಿಯ ಒಳಪೊರೆಯು ಕೆಂಪಾಗಿರುವುದು,
- ಲೋಳೆಯ ಪ್ರಮಾಣ ಕಡಿಮೆಯಾಗುವುದರ ಜೊತೆಗೆ ಅದು ಮಂದಾಗುವುದು.
- ಈ ಅವಧಿಯಲ್ಲಿ ಬೇರೆ ದನಗಳನ್ನು ತನ್ನ ಮೇಲೆ ಹಾರಲು ಅನುವು ಮಾಡಿಕೊಡುವುದು.
ಇ. ಹಿಂಬೆದೆ:
- ಈ ಹಂತದಲ್ಲಿ ಒದರುವುದು ಕಡಿಮೆಯಾಗುವುದು,
- ಯೋನಿಯ ಊತ ಹಾಗೂ ಲೋಳೆ ಸೋರುವಿಕೆ ಕಡಿಮೆಯಾಗುವುದರ ಜೊತೆಗೆ ಲೋಳೆ ಅಂಟಿನಂತೆ ದಪ್ಪವಾಗಿರುವುದು
- ಬೇರೆ ದನಗಳನ್ನು ತನ್ನ ಮೇಲೆ ಹಾರಲು ಸಹಕರಿಸುವುದು.
ಬೆದೆಯ ಹಂತಗಳು
- ಪ್ರಥಮ ಬೆದೆ - 6 ಗಂಟೆ
- ಮಧ್ಯಮ ಬೆದೆ - 6 ರಿಂದ 16 ಗಂಟೆ
- ಅಂತಿಮ ಬೆದೆ - 16 ರಿಂದ 24 ಗಂಟೆ
- ಬೆಳಿಗ್ಗೆ ಬೆದೆಯ ಲಕ್ಷಣ ಕಂಡರೆ - ಸಂಜೆಯೊಳಗೆ ಕೃತಕ ಗರ್ಭಧಾರಣೆ ಮಾಡಿಸಬೇಕು.
- ಸಂಜೆ ಬೆದೆಯ ಲಕ್ಷಣ ಕಂಡರೆ - ಮರುದಿನ ಬೆಳಿಗ್ಗೆಯೊಳಗೆ ಕೃತಕ ಗರ್ಭಧಾರಣೆಗೆ ಸೂಕ್ತ.
ಬೆದೆಯ ಅಂತರ - 18 ರಿಂದ 21 ದಿನಗಳು
ಬೆದೆಯ ಅವಧಿ - 18 ರಿಂದ 24 ಗಂಟೆಗಳು
ಬೆದೆಯ ಲಕ್ಷಣಗಳು
- ಅರಚುವುದು
- ಮಡಲಿಂದ ಲೋಳೆ (ಸೊನೆ) ಸೂಸುವುದು
- ಹಾಲಿನ ಇಳುವರಿ ಕಡಿಮೆಯಾಗುವುದು
- ಚಡಪಡಿಸುವಿಕೆ
- ಬಾಲ ಎತ್ತಿ ಕೊಂಡಿರುವುದು
- ನೀರು ಹಾಗೂ ಆಹಾರದ ಮೇಲೆ ಆಸಕ್ತಿ ಕಡಿಮೆಯಾಗುವುದು
- ಬೇರೆ ರಾಸುಗಳ ಮೇಲೆ ಹಾಯುವುದು
- ಆಗಾಗ ಸ್ವಲ್ಪ ಸ್ವಲ್ಪ ಗಂಜಲ ಹುಯ್ಯುವುದು
- ಬೇರೆ ಹಸುಗಳು ತನ್ನ ಮೇಲೆ ಹಾರಿದರೂ ಸುಮ್ಮನಿರುವುದು
ಸಾಮಾನ್ಯವಾಗಿ ಎಮ್ಮೆಗಳಲ್ಲಿ ಸಂಪೂರ್ಣವಾಗಿ ಮೇಲಿನಂತೆ ಬೆದೆಯ ಲಕ್ಷಣಗಳು ಕಂಡುಬರದೇ ಮೂಕ ಬೆದೆ (ದುರ್ಬಲ ಬೆದೆ) ಕಂಡುಬರುತ್ತದೆ.
ಎಮ್ಮೆಗಳಲ್ಲಿ ಬೆದೆ ಗುರುತಿಸುವಿಕೆ :
- ಎಮ್ಮೆಗಳಲ್ಲಿ ಬೆದೆಯ ಲಕ್ಷಣಗಳು ಆಕಳುಗಳಂತೆ ಸ್ಪಷ್ಟವಾಗಿರುವುದಿಲ್ಲ.
- ಉತ್ತಮ ಕಾಮೋಧ್ರೇಕದ ಟೀಜರ್ ಕೋಣವನ್ನು ಪ್ರತಿ 4 ತಾಸುಗಳಿಗೊಮ್ಮೆ ಹತ್ತಿರ ಬಿಡಬೇಕು.
- ಸಾಯಂಕಾಲ 6 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಹೆಚ್ಚು ಗಮನಹರಿಸಬೇಕು ಏಕೆಂದರೆ ಪ್ರತಿಶತ 45 ರಷ್ಟು ಎಮ್ಮೆಗಳು ರಾತ್ರಿ ವೇಳೆಯಲ್ಲಿ ಬೆದೆಗೆ ಬರುತ್ತವೆ.
- ಎಮ್ಮೆಗಳು ಮಲಗಿದಾಗ ಮೇಲಿಂದ ಮೇಲೆ ಮೂತ್ರ ವಿಸರ್ಜನೆ ಮಾಡುವುದು ಮತ್ತು ಯೋನಿಯಿಂದ ಲೋಳೆ ಬೀಳುವುದನ್ನು ಗಮನಿಸಬೇಕು.
ಕೃತಕ ಗರ್ಭಧಾರಣೆ
ಕೃತಕ ಗರ್ಭಧಾರಣೆಯಲ್ಲಿ ಒಂದು ಹೋರಿಯಿಂದ ಒಮ್ಮೆ ಪಡೆದ ವೀರ್ಯವನ್ನು ಅಧಿಕ ಸಂಖ್ಯೆಯ ಆಕಳು / ಎಮ್ಮೆಗಳಿಗೆ ಉಪಯೋಗಿಸಲು ಅನುಕೂಲವಾಗುತ್ತದೆ ಮತ್ತು ನೈಸರ್ಗಿಕ ಗರ್ಭಧಾರಣೆಯಿಂದ ಹರಡಬಹುದಾದ ಲೈಂಗಿಕ ಕಾಯಿಲೆಗಳನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೇ, ಘನೀಕರಿಸಿದ ವೀರ್ಯದಿಂದ ಹೋರಿ ಸತ್ತ ನಂತರವೂ ಕೃತಕ ಗರ್ಭಧಾರಣೆಗೆ ಉಪಯೋಗಿಸಬಹುದು ಮತು ವೀರ್ಯವನ್ನು ದೂರದ ಸ್ಥಳಗಳಿಗೆ ತೆಗೆದುಕೊಂಡು ಹೋಗಬಹುದು. ಕೃತಕ ಗರ್ಭಧಾರಣೆಯಿಂದ ಹೋರಿಯ ವೀರ್ಯದ ವಿವರ ಮತ್ತು ದಾಖಲೆಗಳನ್ನು ಕೂಡ ಮಾಡಬಹುದು. ಇತ್ತೀಚಿನ ದಿನಗಳಲ್ಲಿ “ವರ್ಗೀಕೃತ ವೀರ್ಯ (ಸಾರ್ಟೆಡ್ ಸೆಮೆನ್)” ಪದ್ದತಿಯಿಂದ ಸುಮಾರು 9೦ ಪ್ರತಿಶತ ಹೆಣ್ಣು ಕರುಗಳನ್ನು ಪಡೆಯಬಹುದಾಗಿದೆ.
ಉಪಯೋಗಗಳು:
- ಒಂದು ಹೋರಿಯಿಂದ ಒಮ್ಮೆ ಪಡೆದ ವೀರ್ಯವನ್ನು ಅಧಿಕ ಸಂಖ್ಯೆಯ ಆಕಳು/ಎಮ್ಮೆಗಳಿಗೆ ಉಪಯೋಗಿಸಲು ಅನುಕೂಲ.
- ನೈಸರ್ಗಿಕ ಗರ್ಭಧಾರಣೆಯಿಂದ ಹರಡಬಹುದಾದ ಲೈಂಗಿಕ ಕಾಯಿಲೆಗಳನ್ನು ತಡೆಗಟ್ಟಬಹುದು.
- ಹೋರಿಗಳ ಸಾಗಣೆ ವೆಚ್ಚದಲ್ಲಿ ಉಳಿತಾಯ
- ವೀರ್ಯವನ್ನು ದೂರದ ಸ್ಥಳಗಳಿಗೆ ತೆಗೆದುಕೊಂಡು ಹೋಗಬಹುದು
- ಆಯ್ದ ಉತ್ತಮ ತಳಿ ಹೋರಿಯಿಂದ ಉತ್ತಮ ಸಂತಾನ ಪಡೆಯಬಹುದು.
- ಘನೀಕರಿಸಿದ ವೀರ್ಯದಿಂದ ಹೋರಿ ಸತ್ತ ನಂತರವೂ ಕೃತಕ ಗರ್ಭಧಾರಣೆಗೆ ಉಪಯೋಗಿಸಬಹುದು.
- ಕೃತಕ ಗರ್ಭಧಾರಣೆಯಿಂದ ಹೋರಿಯ ವೀರ್ಯದ ವಿವರ ಮತ್ತು ದಾಖಲೆಗಳನ್ನು ಮಾಡಬಹುದು.
- ಶಾರೀರಿಕ ನ್ಯೂನತೆಗಳಿಂದ ಸರಿಯಾಗಿ ಸಂಭೋಗ ಮಾಡಲು ಸಾಧ್ಯವಿಲ್ಲದ ಹೋರಿಗಳ ಉಪಯೋಗವನ್ನು ಪಡೆಯಬಹದು.
ಹೈನುಗಾರಿಕೆ ಉದ್ಯಮಕ್ಕೆ ಆಶಾಕಿರಣ:
ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಙಾನ ಕ್ಷೇತ್ರದಲ್ಲಿ ಸಂಶೋಧನೆಯ ಫಲಿತಾಂಶಗಳು ಹೈನುಗಾರಿಕೆ ಉದ್ಯಮಕ್ಕೆ ಉಜ್ವಲ ಭವಿಷ್ಯದ ಭರವಸೆ ನೀಡುವುದರೊಂದಿಗೆ, ನಮ್ಮ ಜಾನುವಾರುಗಳ ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ. ಬಹು ಅಂಡೋತ್ಪತ್ತಿ ಮತ್ತು ಭ್ರೂಣ ವರ್ಗಾವಣೆ (Multi ovulation and Embryo Transfer Technology) ತಂತ್ರಜ್ಞಾನವು ಉನ್ನತ ಹಸುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದನ್ನು ಸಾಮಾನ್ಯವಾಗಿ ಸಂಘಟಿತ ಡೈರಿ ಫಾರ್ಮಗಳಲ್ಲಿ ಹೆಚ್ಚಾಗಿ ಬಳಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಈ ಅಧ್ಯಯನವನ್ನ್ನು ಕ್ಷೇತ್ರ ಮಟ್ಟದ ಪರಿಸ್ಥಿತಿಗಳಲ್ಲಿ ದೇವಣಿ ತಳಿ ಸಂರಕ್ಷಣೆ ಮತ್ತು ಪ್ರಸರಣವನ್ನು ಕೈಗೊಳ್ಳಲು ಚಿಕ್ಕ ಪ್ರಯತ್ನವನ್ನು ಮಾಡಲಾಗಿದೆ.
ದನಗಳಲ್ಲಿ ಸಂತಾನೋತ್ಪತ್ತಿಯ ತೊಂದರೆಗಳು
ದನಗಳಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಸಂತಾನೋತ್ಪತ್ತಿಯ ತೊಂದರೆಗಳು ಕಂಡುಬರುತ್ತವೆ.
- ಗರ್ಭಕೋಶದಲ್ಲಿ ಉರಿಯೂತ ಹಾಗೂ ಕೀವು
- ದನಗಳಲ್ಲಿ ಮಾಸ ಚೀಲ ನಿಂತು ಹೋಗುವಿಕೆ
- ದನಗಳಲ್ಲಿ ಮೈ ಹಾಯುವುದು
- ಅಂಡಾಶಯಗಳಲ್ಲಿ ಬುಡ್ಡೆಗಳ ಬೆಳವಣಿಗೆ
- ದನಗಳು ಬೆದೆಗೆ ಬಾರದೇ ಇರುವದು.
ಎಮ್ಮೆಗಳಲ್ಲಿ ಗರ್ಭಧರಿಸುವಿಕೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳು
- ಉತ್ತಮ ಗುಣಮಟ್ಟದ ಆಹಾರ ಮತ್ತು ಮೇವು ಒದಗಿಸುವುದು.
- ಸರಿಯಾದ ಸಮಯದಲ್ಲಿ ಬೆದೆ ಗುರುತಿಸುವಿಕೆ
- ಗರ್ಭಧಾರಣೆ ಮಾಡಿಸಲು ಸರಿಯಾದ ಅವಧಿ ಕಂಡು ಹಿಡಿಯುವುದು,
- ಬೇಸಿಗೆಯಲ್ಲಿ ಎಮ್ಮೆಗಳ ಬೆದೆ ನಿರ್ವಹಣೆ
- ಕರು ಹಾಕಿದ ನಂತರ ಬೆದೆಗೆ ಬಾರದೇ ಇರುವುದನ್ನು ನಿಯಂತ್ರಿಸುವುದು