ಭಾರತವು ಪ್ರಸ್ತುತ 535 ಮಿಲಿಯನ್ ಜಾನುವಾರುಗಳನ್ನು ಹೊಂದಿದ್ದು, ಪ್ರತಿ ವರ್ಷ ಪ್ರತಿಶತ 4 ರಷ್ಟು ಹೆಚ್ಚುತ್ತಿದ್ದು, ಸದ್ಯ ದೇಶದಲ್ಲಿ 20ನೇ ಜಾನುವಾರು ಗಣತಿ 2019-20 ರ ಪ್ರಕಾರ 190 ಮಿಲಿಯನ್ ದನಗಳು (36%), 109 ಮಿಲಿಯನ್ ಎಮ್ಮೆಗಳು (20%) ಇವೆ, ಈ ಪಶುಸಂಗೋಪನೆಯು ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡುತ್ತಿದೆ.
ಗ್ರಾಮೀಣ ಭಾರತದಲ್ಲಿ 15-20% ಭೂರಹಿತ ಕುಟಂಬಗಳಿದ್ದು ಇವರು ಪಶುಪಾಲನೆಯನ್ನು ತಮ್ಮ ಜೀವಾನಾಧಾರವಾಗಿಸಿಕೊಂಡಿದ್ದಾರೆ.
ಭೂಮಿಯನ್ನು ಹೊಂದಿರುವ ದೊಡ್ಡ ಹಾಗೂ ಸಣ್ಣ ರೈತರು ದನ ಮತ್ತು ಎಮ್ಮೆಗಳನ್ನು ಹೆಚ್ಚಾಗಿ ಸಾಕಿದರೆ ಭೂರಹಿತ ರೈತಾಪಿ ಜನರು ವಿಶೇಷವಾಗಿ ಜಾನುವಾರುಗಳನ್ನು ಅವಲಂಬಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 20ನೇ ಜಾನುವಾರು ಗಣತಿ 2019-20 ರ ಪ್ರಕಾರ ಒಟ್ಟು 290 ಲಕ್ಷ ಜಾನುವಾರುಗಳಿವೆ ಹಾಗೂ
534 ಲಕ್ಷ ಕುಕ್ಕಟಗಳು ಇದ್ದು, 79 ಲಕ್ಷ ಮೆಟ್ರಿಕ್ ಟನ್ ಹಾಲು, 3 ಲಕ್ಷ ಟನ್ ಮಾಂಸ ಹಾಗೂ
66914 ಲಕ್ಷ ಮೊಟ್ಟೆ ಉತ್ಪಾದನೆಯಾಗುತ್ತಿದೆ. ನಮ್ಮ ರಾಜ್ಯ ದೇಶದಲ್ಲಿ ಹಾಲು ಮತ್ತು ಮೊಟ್ಟೆ ಉತ್ಪಾದೆಯಲ್ಲಿ
ಕ್ರಮವಾಗಿ 11ನೇ ಮತ್ತು 5ನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಪಶುಸಂಗೋಪನಾ ಅಭಿವೃದ್ಧಿಗಾಗಿ ಹಲವು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಅಡಿ ವಿವಿಧ ಸಂಸ್ಥೆಗಳು ಜಾನುವಾರುಗಳ ಆರೋಗ್ಯ,
ರೈತರಿಗೆ ಪ್ರಾಯೋಗಿಕ ಜಾನುವಾರು ಉತ್ಪಾದನಾ ತರಬೇತಿ ಹಾಗೂ ವಿಸ್ತರಣಾ ಸೇವೆಗಳನ್ನು ನೀಡುತ್ತಿವೆ.
ಸದ್ಯ ರಾಜ್ಯದಲ್ಲಿ 665 ಪಶು ಆಸ್ಪತ್ರೆಗಳು, 2135 ಪಶು ಚಿಕಿತ್ಸಾಲಯಗಳು, 176 ಸಂಚಾರಿ ಪಶು ಚಿಕಿತ್ಸಾಲಯಗಳು,
1206 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, 239 ಕೃತಕ ಗರ್ಭಧಾರಣೆ ಕೇಂದ್ರಗಳು,
52 ಕುರಿ ಮತ್ತು ಉಣ್ಣೆ ಅಭಿವೃದ್ಧಿ ಕೇಂದ್ರಗಳು ಹಾಗೂ ರೋಗಪತ್ತೆ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು – ವಿಶೇಷವಾಗಿ ಸಣ್ಣ ಮತ್ತು ಅತೀ ಸಣ್ಣ ರೈತರು –
ಹೈನುಗಾರಿಕೆಯನ್ನು ಮುಖ್ಯ ಉದ್ಯಮವಾಗಿ ಕೈಗೊಳ್ಳುತ್ತಿದ್ದಾರೆ.
ಮಹಿಳೆಯರು ಮನೆಯಲ್ಲೇ ಇತರೆ ಕೆಲಸಗಳ ಜೊತೆಗೆ ಹೈನುಗಾರಿಕೆಯನ್ನು ನಿಭಾಯಿಸಬಹುದು ಮತ್ತು
ಮಾರುಕಟ್ಟೆಯ ಸಮಸ್ಯೆಯಿಲ್ಲ.
ಕೃಷಿ ಉಪಉತ್ಪನ್ನಗಳ ಲಾಭದಾಯಕ ಉಪಯೋಗದ ಜೊತೆಗೆ ಹೆಚ್ಚು ಗೊಬ್ಬರದ ಉತ್ಪಾದನೆಯಿಂದ ಗ್ರಾಮೀಣ ಜನರ ಆರ್ಥಿಕ ಬೇಸಾಯಕ್ಕೆ ಪೂರಕವಾಗಿರುತ್ತದೆ ಹಾಗೂ ಇಂದಿನ ಸಾವಯವ ಕೃಷಿಯ ಯುಗದಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಹೈನುಗಾರಿಕೆಯಿಂದ ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿ ಸಾದ್ಯವಾಗುತ್ತದೆ.