ಸ್ವಾಭಾವಿಕವಾಗಿ ಹೈನುರಾಸುಗಳಿಗೆ ಹಸಿರು ಹುಲ್ಲು ಹಾಗೂ ಒಣ ಮೇವು ಮತ್ತು ವೈಜ್ಞಾನಿಕ ರೀತಿಯಲ್ಲಿ ತಯಾರಿಸಿದ ದಾಣಿ ಮಿಶ್ರಣ ಬೇಕಾಗುತ್ತದೆ. ಹೆಚ್ಚು ಹಾಲು ಉತ್ಪಾದನೆ ಮಾಡಬೇಕಾದಲ್ಲಿ ಸಾಮಾನ್ಯವಾಗಿ ನೀಡುವ ಹಸಿರು ಹುಲ್ಲು ಹಾಗೂ ಒಣ ಹುಲ್ಲಿನ ಮುಖಾಂತರ ಬೇಕಾದಷ್ಟು ಪ್ರಮಾಣದ ಪೋಷಕಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಪೂರ್ವ ನಿರ್ಧಾರಿತ ಪ್ರಮಾಣದಲ್ಲಿ ಸಮತೋಲನ ಪಶು ಆಹಾರವನ್ನು ನೀಡಬೇಕಾಗುತ್ತದೆ. ವೈಜ್ಞಾನಿಕವಾಗಿ ತಯಾರು ಮಾಡಿರುವ ಪಶು ಆಹಾರದಲ್ಲಿ ಹೈನುರಾಸುಗಳಿಗೆ ಬೇಕಾಗುವ ಪ್ರಮಾಣದಲ್ಲಿ ಸಸಾರಜನಕ ದೊರಕಲಿದ್ದು, ಅವುಗಳು ಆರೋಗ್ಯಕರವಾಗಿರಲು ಸಹಾಯ ಮಾಡುವುದಲ್ಲದೇ, ಹಾಲು ಉತ್ಪಾದನೆಯನ್ನು ಹೆಚ್ಚಿಸಿ ಕಾಲಕಾಲಕ್ಕೆ ಗರ್ಭ ಧರಿಸಲು ಸಹಾಯವಾಗುತ್ತದೆ. ಹೈನುರಾಸುಗಳ ತೂಕ, ಹಾಲಿನ ಪ್ರಮಾಣ ಮತ್ತು ಅದರಲ್ಲಿರುವ ಸತ್ವಾಂಶಗಳು, ಕರಾವಿನ ಹಂತ ಅವುಗಳನ್ನು ಗಮನಿಸಿ ರಾಸುಗಳಿಗೆ ನೀಡಬೇಕಾಗಿರುವ ಪೋಷಕಾಂಶಗಳನ್ನು ನಿರ್ಧರಿಸಬೇಕಾಗುತ್ತದೆ.
ಶಿಫಾರಸು ಮಾಡಲಾದ ಹಸಿರು ಮೇವುಗಳೆಂದರೆ, ನೇಪಿಯರ ಹುಲ್ಲು, ಮೇವಿನ ಗೋವಿನ ಜೋಳ, ರೋಡ್ಸ ಹುಲ್ಲು, ಪ್ಯಾರಾ ಹುಲ್ಲು, ಕುದುರೆ ಮೆಂತೆ, ಮೇವಿನ ಅಲಸಂದೆ ಮುಖ್ಯವಾದವು. ಒಂದು ಹೈನು ರಾಸಿಗೆ ಸರಾಸರಿ ದಿನಕ್ಕೆ 15 ರಿಂದ 20 ಕಿ.ಗ್ರಾ. ನಷ್ಟು ಹಸಿಮೇವು ಮತ್ತು 3 ಕಿ.ಗ್ರಾ. ನಷ್ಟು ಒಣ ಮೇವು ಅವಶ್ಯವಿದೆ.
ಹಸಿರು ಹುಲ್ಲನ್ನು ರೈತರು ತಾವೇ ಬೆಳೆಯುವದು ಲಾಭಕರ. ಐದು ಹೈನು ರಾಸುಗಳ ಘಟಕಕ್ಕೆ ಮೇವನ್ನು ಬೆಳೆಯಲು ಕನಿಷ್ಟ ಒಂದು ಎಕರೆ ನೀರಾವರಿ ಭೂಮಿ ಅವಶ್ಯ. ಪ್ರತಿ ಹೈನು ರಾಸಿಗೆ ಆದರ ದೈಹಿಕ ಅವಶ್ಯಕತೆಗಾಗಿ 1 ರಿಂದ 1.5 ಕಿ.ಗ್ರಾ. ನಷ್ಟು ದಾಣಿ ಮಿಶ್ರಣ/ ಪಶು ಆಹಾರ ಬೇಕಾಗುತ್ತದೆ. ಎರಡೂವರೆಯಿಂದ ಮೂರು ಲೀಟರು ಹಾಲಿನ ಉತ್ಪಾದನೆಗೆ 1 ಕಿ.ಗ್ರಾ. ನಷ್ಟು ಹೆಚ್ಚಿನ ದಾಣಿ ಮಿಶ್ರಣ ಬೇಕಾಗುತ್ತದೆ. ಈ ದಾಣಿ ಮಿಶ್ರಣವನ್ನು ಹೊರಗಿನಿಂದ ಖರೀದಿಸುವದಕ್ಕಿಂತ ರೈತರು ತಾವೇ ತಯಾರಿಸಿಕೊಳ್ಳುವದು ಉತ್ತಮ.
ಖನಿಜ ಲವಣಾಂಶಗಳು ಸಹ ಪಶುಗಳ ಆರೋಗ್ಯಕ್ಕೆ ಮತ್ತು ಉತ್ಪಾದನೆಗೆ ಅಗತ್ಯವಾದುದು. ಪಶು ಆಹಾರದಲ್ಲಿ ಕೊಬ್ಬು, ರಂಜಕ, ಸುಣ್ಣ ಮತ್ತು ಅಲ್ಪ ಪ್ರಮಾಣದಲ್ಲಿ ಇರುವ ಖನಿಜಾಂಶಗಳಾದ ಅಯೋಡಿನ್, ಕೋಬಾಲ್ಟ್ ಮತ್ತು ತಾಮ್ರದ ಪಾತ್ರ ಪ್ರಮುಖವಾಗಿವೆ.
ಹಾಲಿನಲ್ಲಿ ಕೊಬ್ಬು ಮತ್ತು ಎಸ್ ಎನ್ ಎಫ್ ಹೆಚ್ಚಿಸುವ ಮಾಹಿತಿಯಿರುವ ವಿಡಿಯೊ: Click Here For YouTube Video
ಆಯಾ ಭೌಗೋಳಿಕ ವಾತಾವರಣಕ್ಕೆ ಹೊಂದಿಕೊಳ್ಳುವ ಉತ್ತಮ ಗುಣಮಟ್ಟದ ಅಧಿಕ ಇಳುವರಿ ನೀಡುವ ಹಸಿರು ಮೇವಿನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಉತ್ಪಾದಕರು ತಮಗೆ ಸೂಕ್ತವಾದ ಮೇವಿನ ತಳಿಗಳನ್ನು ಆಯ್ಕೆ ಮಾಡಿಕೊಂಡು ಹಸಿರು ಮೇವನ್ನು ಬೆಳೆದು ವೈಜ್ಞಾನಿಕ ವಿಧಾನದಲ್ಲಿ ಹೈನುಗಾರಿಕೆ ಮಾಡಿದಲ್ಲಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದನೆ ಮಾಡಬಹುದಾಗಿದೆ.
ಪಶುಗಳಿಗೆ ಒದಗಿಸುವ ಒಟ್ಟು ಆಹಾರದಲ್ಲಿ ಶೇ. 60-100 ರಷ್ಟು ಭಾಗ ಮೇವಾಗಿರುತ್ತದೆ. ಪಶುಗಳಿಗೆ ಪೂರೈಸುವ ಒಟ್ಟು ಮೇವಿನಲ್ಲಿ ಶೇ. 65 ಭಾಗ ಉತ್ತಮ ದರ್ಜೆಯ ಏಕದಳ ಹಸಿರು ಮೇವು ಹಾಗೂ ಶೇ. 35 ಭಾಗ ಒಳ್ಳೆಯ ದ್ವೀದಳ ಹಸಿರು ಮೇವಾಗಿದ್ದರೆ ಜಾನುವಾರುಗಳಿಗೆ ಸಮತೋಲನ ಆಹಾರ ಒದಗಿಸಿದಂತಾಗುತ್ತದೆ. ಇದರಿಂದ ಪ್ರತಿದಿನ 5-6 ಲೀ. ಗಳವರೆಗೆ ಹಾಲನ್ನು ದಾಣಿ ಮಿಶ್ರಣವಿಲ್ಲದೆ ಪಡೆಯಬಹುದು. ಆದ್ದರಿಂದ ಮೇವಿನ ಬೆಳೆಗಳು, ಸಾಗುವಳಿ ಕ್ರಮಗಳು ಹಾಗೂ ಅವುಗಳ ಸಂಗ್ರಹಣೆಯ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾದದ್ದು. ನೀರಾವರಿ ಅನುಕೂಲತೆ ಇದ್ದಲ್ಲಿ ಮೇವಿನ ಬೆಳೆ ಯೋಜನೆ ಹಾಕಿಕೊಂಡು ಒಂದು ಎಕರೆ ಪ್ರದೇಶದಲ್ಲಿ 3-5 ಹೈನು ದನಗಳನ್ನು ಸಾಕಬಹುದು.
ಒಂದು ಸಮೀಕ್ಷೆಯ ಪ್ರಕಾರ ಇಂದು ರಾಜ್ಯದಲ್ಲಿ ಶೇ. 35 ರಷ್ಟು ಹಸಿರು ಮೇವಿನ ಕೊರತೆ ಇದೆ. ಮುಂದುವರೆದು, ಇಂದು ಲಭ್ಯವಿರುವ ಆಹಾರ ಧಾನ್ಯ ಬೆಳೆಗಳ ಉಳಿಕೆಗಳು ನಮ್ಮ ಅವಶ್ಯಕತೆಯ ಶೇ. 50 ರಷ್ಟು ಮಾತ್ರ ಪೂರೈಸುತ್ತವೆ. ಇನ್ನು ಹೈನು ರಾಸುಗಳಿಗೆ ಉತ್ತಮ ಪ್ರೋಟಿನ್, ಪಿಷ್ಟ, ಖನಿಜಾಂಶಗಳು ಮತ್ತು ವಿಟಮಿನ್ಯುಕ್ತ ಹೆಸರು ಮೇವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡುವದರಿಂದ ಅವುಗಳಿಗೆ ನೀಡುವ ದಾಣಿ ಮಿಶ್ರಣದ ಪ್ರಮಾಣವನ್ನು ಕಡಿಮೆ ಮಾಡಿ ಕೂಡ ಉತ್ಪಾದಕತೆ ಕಾಯ್ದುಕೊಳ್ಳಬಹುದು. ಸಾಮಾನ್ಯವಾಗಿ ಹಸಿರು ಮೇವಿಗಾಗಿ ಹುಲ್ಲುಗಳು, ಏಕದಳ ಹಾಗು ದ್ವಿದಳ ಬಹುವಾರ್ಷಿಕ ಹಾಗೂ ಕೆಲವು ಮೇವಿನ ಮರಗಳು ಲಭ್ಯವಿವೆ.
ಸೂಬಾಬುಲ್, ಆರಿಗಿಡ, ಬಸವನಪಾದ, ಶಿವನಿ, ಸಿಸ್ಸೂ(ಸೀಸಂ), ಬಾಗೆ(ಶಿರೀಷ), ಕರಿಜಾಲಿ, ಬನ್ನಿ ಚೊಗಚೆ, ಕ್ಯಾಲಿಯಾಂಡ್ರಾ, ಮಳೆ ಮರ, ಅರಿಬೇವು, ಗೊಬ್ಬರಗಿಡ, ಅಚಿಜನ, ದಾಮಣಿ, ಹಾಲಿವಾಣ, ವಿಲಾಯತಿ ಹುಣಸೆ
ಹಸಿರು ಮೇವು ಉತ್ಪಾದನೆಯ ಕುರಿತು ವಿಡಿಯೊ : Click Here For YouTube Video
ಅಜೋಲ್ಲಾವು ನೀರಿನಲ್ಲಿ ತೇಲಾಡಿ ಬೆಳೆಯುವ ಒಂದು ಸಸ್ಯ ಪ್ರಭೇದ. ಇದು ಸಾಮಾನ್ಯವಾಗಿ ಪಾಚಿಯನ್ನು ಹೋಲುತ್ತದೆ. ಇದನ್ನು ಭತ್ತದ ಗದ್ದೆಗಳಲ್ಲಿ ಅಥವಾ ಆಳವಿಲ್ಲದ ನೀರಿನ ಹೊಂಡಗಳಲ್ಲಿ ಬೆಳೆಯಬಹುದು. ಬೆಳವಣಿಗೆಗೆ ಪೂರಕವಾಗುವ ವಾತಾವರಣದಲ್ಲಿ ಅಂದರೆ ರಸಸಾರ 4-7, ಉಷ್ಣಾಂಶ 20-280 ಸೆ., ಶೇ. 50 ರಷ್ಟು ಸೂರ್ಯನ ಬೆಳಕು, ಸಾಪೇಕ್ಷ ತೇವಾಂಶ ಶೇ. 65-80 ಮತ್ತು ಗುಂಡಿಯಲ್ಲಿ ನಿಂತ ನೀರು 5-12 ಸೆಂ.ಮೀ. ಗಳಲ್ಲಿ ಬಹುಬೇಗ ಬೆಳೆಯುವುದರಿಂದ ಪ್ರತಿ ದಿನ ಕೊಯ್ಲು ಮಾಡಬಹುದು. ರೈತರಿಗೆ ಇದು ಅತ್ಯಂತ ಉಪಯುಕ್ತವಾದ ಬೆಳೆಯಾಗಿದೆ. ಅಜೋಲ್ಲಾವನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಲು ಸಾಧ್ಯ. ಈ ಸಸ್ಯವು ಸಾರಜನಕ ಹಾಗೂ ಇತರೆ ಪೋಷಕಾಂಶಗಳನ್ನು ಒಳಗೊಂಡ ಒಂದು ಸಂಪದ್ಬರಿತ ಸಸ್ಯವಾಗಿದ್ದು, ಇದರಲ್ಲಿ ಲಿಗ್ನಿನ್ ಅಂಶವು ಕಡಿಮೆ ಇರುತ್ತದೆ. ಆದ್ದರಿಂದ ಇದನ್ನು ಹಸು, ಕೋಳಿ, ಮೇಕೆ ಹಾಗೂ ಹಂದಿಗಳಿಗೂ ಪೂರಕ ಆಹಾರವಾಗಿ ಬಳಸಬಹುದು.
ಒಣ ಅಂಶ : - ಶೇ. 8-10
ಕಚ್ಚಾ ನಾರು : - ಶೇ. 12-14
ಕಚ್ಚಾ ಸಸಾರಜನಕ : - ಶೇ. 20-25
ಲವಣಗಳು : - ಶೇ. 10-15
ಮೇಲಿನ ಪೋಶಕಾಂಶಗಳ ಜೊತೆಗೆ ಅನ್ನಾಂಗಗಳು (ವಿಟಮಿನ್ ಎ, ಬಿ-12, ಬೀಟಾ ಕೆರೋಟಿನ್), ಬೆಳೆವಣಿಗೆ ಪ್ರಚೋಧಿಸುವ ಜೀವಸತ್ವಗಳು, ಲವಣಗಳಾದ ಕ್ಯಾಲ್ಸಿಯಂ, ರಂಜಕ, ಪೊಟ್ಯಾಷ್, ಕಬ್ಬಿಣ, ತಾಮ್ರ, ಜೀವ ಚೈತನ್ಯಕಾರಕಗಳು ಮತ್ತು ಪಾಲಿಮರ್ಗಳಿಂದ ಅಜೋಲ್ಲಾ ಸಮೃದ್ಧವಾಗಿದೆ.
ಈ ತಂತ್ರಜ್ಞಾನವನ್ನು ಜಲಕೃಷಿ ಅಥವಾ ಆಂಗ್ಲ ಭಾಷೆಯಲ್ಲಿ ಹೈಡ್ರೊಪೋನಿಕ್ಸ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಬೆಳೆದ ಹಸಿರು ಮೇವನ್ನು ಮೊಳಕೆ / ಚಿಗುರು ಮೇವು ಎನ್ನುತ್ತಾರೆ. ಈ ವಿಧಾನದಲ್ಲಿ ಮೊಳಕೆ / ಚಿಗುರು ಮೇವು ಬೆಳೆಯಲು ಮಣ್ಣಿನ ಅವಶ್ಯಕತೆ ಇರುವುದಿಲ್ಲ. ‘ಹೈಡ್ರೋ’ ಎಂದರೆ ನೀರು ಹಾಗೂ ‘ಪೋನಿಕ್’ ಎಂದರೆ ಕೆಲಸ ಮಾಡುವುದು. ಹೈಡ್ರೋಪೋನಿಕ್ಸ್ ಎಂದರೆ ನಿಯಂತ್ರಿತ ಕೊಠಡಿಯಲ್ಲಿ ಬೀಜ ಮತ್ತು ನೀರನ್ನು ಬಳಸಿ ಮೇವನ್ನು ಉತ್ಪಾದಿಸುವುದು. ಹೈಡ್ರೋಪೋನಿಕ್ ಮೇವನ್ನು ಹಸಿರು ಮನೆಯಲ್ಲು ಬೆಳೆಯಲಾಗುತ್ತಿದೆ. ಈ ಮನೆಯಲ್ಲಿ ಬೆಳಕು, ಉಷ್ಣಾಂಶ, ಆರ್ದ್ರತೆ ಮತ್ತು ಗಾಳಿ (ಆಮ್ಲಜನಕ ಮತ್ತು ಇಂಗಾಲ)ಯ ಪ್ರಮಾಣವನ್ನು ನಿಯಂತ್ರಿಸುವುದರಿಂದ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಮೇವನ್ನು ಉತ್ಪಾದಿಸಬಹುದು.
ಜಲಕೃಷಿ ಪದ್ದತಿಯಿಂದ ಬೆಳೆದ ಹಸಿರು ಮೇವನ್ನು ದಿನವೊಂದಕ್ಕೆ ವಯಸ್ಕ ರಾಸುಗಳಿಗೆ 10-15 ಕೆ.ಜಿ. ಮತ್ತು ಆಡು-ಕುರಿಗಳಿಗೆ 1-2 ಕೆ.ಜಿ. ಕೊಡಬಹುದು. ಜಲಕೃಷಿ ಪದ್ದತಿಯಿಂದ ಚಿಗುರು ಮೇವು ಬೆಳೆಯಲು ತಗಲುವ ವಚ್ಚವು ಬೀಜ, ವಿದ್ಯುತ್ ಮತ್ತು ಕಾರ್ಮಿಕರ ಕೂಲಿಯಿಂದ ನಿರ್ಧರಿಸಲಾಗುತ್ತದೆ. ಆದರೆ ಶೇ. 90 ರಷ್ಟು ವೆಚ್ಚದ ಪಾಲು ಬೀಜಗಳಾಗಿರುತ್ತದೆ, ಹೀಗಾಗಿ ರೈತನು ತಾನು ಬೆಳೆದ ಬೀಜಗಳನ್ನು ಉಪಯೋಗಿಸಿದರೆ ವೆಚ್ಚವನ್ನು ಕಡಿಮೆ ಮಾಡಬಹುದು. ಅಂದಾಜಿನಂತೆ ಒಂದು ಕೆ.ಜಿ ಮೊಳಕೆ ಮೇವು (ಮೆಕ್ಕೆ ಜೋಳ) ಬೆಳೆಯಲು ರೂ 4.50 - 6.50 ಖರ್ಚಾಗಬಹುದು.
ಜಲಕೃಷಿ ಘಟಕ
ಜಾನುವಾರುಗಳಿಗೆ ಹಸಿರು ಮೇವು ಒದಗಿಸುವುದರಿಂದ ಅವುಗಳ ಆರೋಗ್ಯ ಹಾಗೂ ಉತ್ಪಾದನೆ ಉತ್ತಮವಾಗಿರುತ್ತದೆ ಮತ್ತು ದಾಣಿ ಮಿಶ್ರಣದ ಖರ್ಚನ್ನು ಕಡಿಮೆ ಮಾಡಬಹುದು. ಆದರೆ ವರ್ಷವಿಡೀ ಹಸಿರು ಮೇವನ್ನು ಒದಗಿಸುವುದು ನೀರಾವರಿ ಅನುಕೂಲತೆಗಳಿದ್ದಾಗ ಮಾತ್ರ ಸಾಧ್ಯ. ಆದ್ದರಿಂದ ಹಸಿರು ಮೇವನ್ನು ವರ್ಷವಿಡೀ ಒದಗಿಸಲು ಈ ಕೆಳಗಿನ ವಿಧಾನಗಳಿಂದ ಹಸಿರು ಮೇವನ್ನು ಸಂಗ್ರಹಿಸಿಡಬಹುದು.
ಮೇವುಗಳಿಗಾಗಿ ಬೆಳೆಯುವ ಆಹಾರ ಧಾನ್ಯಗಳ ಬೆಳೆಗಳು ಮತ್ತು ಉತ್ತಮ ಹುಲ್ಲುಗಳನ್ನು ರಸಮೇವು ಮಾಡಲು ಬಳಸಬಹುದು. ಶೇ. 65-75 ತೇವಾಂಶವಿರುವ ಮತ್ತು ಹಾಲುಗಾಳು ಇರುವ ಹಂತದಲ್ಲಿ ಬೆಳೆಗಳನ್ನು ಕೊಯ್ದು 1-2 ಅಂಗುಲ ತುಣುಕುಗಳಾಗಿ ಕತ್ತರಿಸಬೇಕು. ಹೀಗೆ ಕತ್ತರಿಸ್ಪಟ್ಟ ಮೇವನ್ನು ಗುಂಡಿಗಳಲ್ಲಿ (ಅನುಕೂಲಕ್ಕೆ ತಕ್ಕಂತೆ ಸಿಗುವ ಯಾವುದೇ ತರಹದ ಕಲ್ಲು, ಕಟ್ಟಿಗೆ, ಸಿಮೆಂಟ್ ಅಥವಾ ಧಾತುವಿನಿಂದ ತಯಾರಿಸಿದ) ಒತ್ತಿ ಒತ್ತಿ ತುಂಬಬೇಕು. ನಂತರ ಗಾಳಿಯಾಡದಂತೆ ಮುಚ್ಚಬೇಕು. ಹೀಗೆ ಮಾಡಿದ 2-3 ವಾರಗಳ ನಂತರ ನಿಯಂತ್ರಿತ ರಸಾಯನಿಕ ಕ್ರೀಯೆಯಿಂದ (ಹುದುಗುವಿಕೆ) ತಯಾರಾದ ಮೇವಿಗೆ ಸೈಲೇಜ್ (Silage) ರಸ ಮೇವು ಅಥವಾ ಹಗೇವು ಮೇವು ಎನ್ನುತ್ತಾರೆ.
ಸೈಲೋಬ್ಯಾಗ್ ಗಳಲ್ಲಿ ಸೈಲೇಜ್ (ರಸಮೇವು) ತಯಾರಿಕೆಯ ವಿಡಿಯೊ Click Here For YouTube Video
ಹಸಿರು ಮೇವನ್ನು ಶೇ. 50 ರಷ್ಟು ಹೂವಾಡುವ ಹಂತದಲ್ಲಿ ಕಟಾವು ಮಾಡಿ ತೇವಾಂಶವನ್ನು ಶೇ. 65-85 ರಿಂದ ಶೇ. 15-20 ರ ವರೆಗೆ ತರುವಂತೆ ಮತ್ತು ಕ್ಯಾರೋಟಿನ್ ಪ್ರಮಾಣ ಸಾಧ್ಯವಾದಷ್ಟು ಕಡಿಮೆಯಾಗದಂತೆ ಅಂದರೆ ನೆರಳಿನಲ್ಲಿ ಕೃತಕವಾಗಿಯಾಗಲೀ ಅಥವಾ ನೈಸರ್ಗಿಕವಾಗಿಯಾಗಲೀ ಒಣಗಿಸಿದ ಹಸಿರು ಎಲೆಗಳಿರುವ ಮೇವಿಗೆ “ಒಣ ಹಸಿರು ಮೇವು” ಎನ್ನುತ್ತಾರೆ. ಹೀಗೆ ಮಾಡಿದಾಗ ಸಸ್ಯ ಮತ್ತು ಸೂಕ್ಷಜೀವಿಗಳ ಕಿಣ್ವಗಳು ಮೇವಿನ ಪೋಷಕಾಂಶಗಳನ್ನು ನಾಶಪಡಿಸದಂತೆ ಕಾಪಾಡಲು ಮತ್ತು ಮೇವುಗಳನ್ನು ಸಂಗ್ರಹಿಸಿಡಲು ಸಾಧ್ಯವಾಗುವುದು.
ಕಡಿಮೆ ತೇವಾಂಶವಿರುವ (ಶೇಕಡ 40-50) ಏಕದಳ ಮೇವುಗಳನ್ನು ಗಾಳಿಯಾಡದ ಗುಂಡಿಗಳಲ್ಲಿ ತುಂಬಿ ಕಳಿಸಿದಂತಹ ಮೇವಿಗೆ “ಹೇಲೇಜ್ (Haylage) ಎನ್ನುತ್ತಾರೆ. ಕಡಿಮೆ ಮಳೆಬಿದ್ದು, ತೇವಾಂಶ ಕಡಿಮೆ ಹೊಂದಿರುವ ಬೆಳೆಗಳು ಅಥವಾ ಕಾಳನ್ನು ತೆಗೆದುಕೊಂಡ ಮೇಲೆ ಉಳಿಯುವ ಹಸಿರು ಮೇವುಗಳಿಂದ ಕಡಿಮೆ ತೇವಾಂಶದ ರಸಮೇವನ್ನು ಮಾಡಬಹುದು.
ಒಣ ಹುಲ್ಲಿನಲ್ಲ್ಲಿ ಸಸಾರಜನಕ ಮತ್ತು ಖನಿಜಗಳು ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ದನಗಳಿಗೆ ಬರಿ ಒಣ ಹುಲ್ಲನ್ನೇ ನೀಡಿದರೆ ಅವುಗಳಿಂದ ಹೆಚ್ಚು ಉತ್ಪಾದನೆ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಪರಿಹಾರೋಪಾಯವಾಗಿ ಯೂರಿಯಾ, ಕಾಕಂಬಿ, ಖನಿಜಾಂಶಗಳು, ಉಪ್ಪು, ತೌಡು ಮೊದಲಾದವುಗಳ ಮಿಶ್ರಣವನ್ನು ಘನಾಕೃತಿ ಪಡಿಯಚ್ಚುಗಳನ್ನಾಗಿಸಿ ರಾಸುಗಳಿಗೆ ನೆಕ್ಕಲು ನೀಡುವುದರಿಂದ ರಾಸುಗಳಿಗೆ ಬೇಕಾದ ಪೂರಕ ಪೌಷ್ಠಿಕಾಂಶಗಳು ಸಿಗುವುದಲ್ಲದೆ ಒಣ ಹುಲ್ಲಿನ ಪಚನ ಕ್ರಿಯೆಗೆ ಹೆಚ್ಚು ಅನುಕೂಲವಾಗುತ್ತದೆ. ಪ್ರತಿ ದಿನವೂ ನಿಗದಿತ ಪ್ರಮಾಣದಲ್ಲಿ ಯೂರಿಯಾ ಮತ್ತು ಖನಿಜಾಂಶಗಳನ್ನು ಸೇವಿಸುವಂತೆ ಮಾಡಲು ಇವುಗಳನ್ನು ಪಡಿಯಚ್ಚುಗಳ ರೂಪದಲ್ಲಿ ನೀಡಲಾಗುತ್ತಿದೆ. ರಾಸುಗಳು ಅಗತ್ಯಕ್ಕೆ ಅನುಸಾರವಾಗಿ ಪಡಿಯಚ್ಚನ್ನು ನೆಕ್ಕುವುದರಿಂದ ಒಂದೇ ಬಾರಿಗೆ ಯೂರಿಯಾ ಸೇವನೆಯಿಂದಾಗುವ ಅಪಾಯದ ಸಾಧ್ಯತೆ ಕಡಿಮೆ.
ಒಣ ಮೇವನ್ನು ಹಾಗೆಯೇ, ರಾಸುಗಳಿಗೆ ನೀಡುವ ಬದಲು ಪರಿಷ್ಕರಿಸಿದ ಹುಲ್ಲನ್ನು ನೀಡುವುದರಿಂದ ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ.
| ಕ್ರ.ಸಂ | ಹುಲ್ಲು/ವಾಡಿ | ಯುರಿಯಾ | ನೀರು |
|---|---|---|---|
| 1. | 25 ಕೆ.ಜಿ | 2 ಕೆ.ಜಿ | 10-12 ಲೀಟರ |
| 2. | 100 ಕೆ.ಜಿ | 4 ಕೆ.ಜಿ | 40-45 ಲೀಟರ |
| 3. | 200 ಕೆ.ಜಿ | 8 ಕೆ.ಜಿ | 80-90 ಲೀಟರ |
ಒಣಮೇವು ಪೌಷ್ಠೀಕರಣದ ವಿಡಿಯೊ : Click Here For YouTube Video
ಸಾಮಾನ್ಯವಾಗಿ ಬಳಕೆಯಲ್ಲಿ ಇರದಂತಹ ಉಪಆಹಾರ ಪದಾರ್ಥಗಳನ್ನು ಅಸಾಂಪ್ರದಾಯಕ ಆಹಾರ ಪದಾರ್ಥಗಳೆಂದು ಕರೆಯಲಾಗುತ್ತದೆ. ಪಶು ಆಹಾರದಲ್ಲಿ ಕೆಲವೊಂದು ಭಾಗ ಈ ಅಸಾಂಪ್ರದಾಯಕ ಪದಾರ್ಥಗಳನ್ನು ಬಳಸುವುದರಿಂದ ಪ್ರಾಣಿಗಳ ಶರೀರದಲ್ಲಿ ಯಾವುದೇ ಹಾನಿಕಾರಕ ಪರಿಣಾಮವಿಲ್ಲದಂತೆ ಆಗಿ ಪಶು ಆಹಾರದ ಬೆಲೆ ಹಾಗೂ ಉತ್ಪಾದನಾ ಬೆಲೆಯನ್ನು ಕಡಿಮೆ ಮಾಡಬಹುದು.
ಪರಿಪೂರ್ಣ ಆಹಾರ ಮಿಶ್ರಣ ಘಟಕದಲ್ಲಿ ಒಣಮೇವನ್ನು ತುಂಡು ಮಾಡುವ ಯಂತ್ರ, ಮೇವು ಹಾಗೂ ದಾಣಿ ಮಿಶ್ರಣವನ್ನು ಪುಡಿಮಾಡುವ ಯಂತ್ರ ಹಾಗೂ ಪುಡಿಮಾಡಿದ ಆಹಾರ ಪದಾರ್ಥವನ್ನು ಮಿಶ್ರಣ ಮಾಡುವ ಯಂತ್ರವನ್ನು ಒಂದೇ ಘಟಕದಲ್ಲಿ ಅಳವಡಿಸಿ ಮೇವು ಹಾಗೂ ಇತರ ಪದಾರ್ಥಗಳನ್ನು ಒಟ್ಟಿಗೆ ಪೂರೈಕೆ ಮಾಡಿ ಮಿಶ್ರಣವನ್ನು ಮಾಡಬಹುದು. ಇಂತಹ ಪರಿಪೂರ್ಣ ಆಹಾರ ಮಿಶ್ರಣ ಘಟಕವನ್ನು ಹಳ್ಳಿಯ ಮಟ್ಟದಲ್ಲಿ ಸರಕಾರಿ ಅಥವಾ ಸಹಕಾರಿ ವ್ಯವಸ್ಥೆಯಡಿ ಸ್ಥಾಪಿಸಿ ರೈತರು ತಮ್ಮಲ್ಲಿ ಲಭ್ಯವಿರುವ ಮೇವು ಮತ್ತು ಆಹಾರ ಪದಾರ್ಥವನ್ನು ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟ, ಕಡಿಮೆ ಖರ್ಚಿನ ಸಂಪೂರ್ಣ ಆಹಾರ ಮಿಶ್ರಣವನ್ನು ತಯಾರಿಸಿಕೊಳ್ಳಬಹುದು.
ಹಳ್ಳಿಯ ಮಟ್ಟದಲ್ಲಿ ಇಂತಹ ಘಟಕವನ್ನು ಸ್ಥಾಪಿಸುವುದರಿಂದ ಆಗುವ ಉಪಯೋಗಗಳೆಂದರೆ;