Responsive Image

ಹೈನುರಾಸುಗಳ ಆಯ್ಕೆ ಹಾಗೂ ಆದಾಯ

ಹೈನುರಾಸುಗಳನ್ನು ಕೊಳ್ಳುವಾಗ ಅವುಗಳ ಬಗ್ಗೆ ವಂಶಾವಳಿಗಳ ದಾಖಲೆ ಇದ್ದರೆ ಅದರ ವಂಶದ ಹಾಲಿನ ಉತ್ಪಾದನೆ ಸಾಮರ್ಥ್ಯ ಮತ್ತು ಅವುಗಳ ಹಿಂದಿನ ಸೂಲಿನ ಹಾಲಿನ ಇಳುವರಿಯನ್ನು ಪರೀಶಿಲಿಸಿ ಹೆಚ್ಚು ಹಾಲು ಉತ್ಪಾದನೆಯುಳ್ಳ ವಂಶದ ದನಗಳನ್ನು ಖರೀದಿಸಬೇಕು. ಇದಲ್ಲದೇ ಹಿಂಡುವ ದನಗಳ ಮೂರು ಅಥವಾ ನಾಲ್ಕು ಹೊತ್ತಿನ ಹಾಲಿನ ಪ್ರಮಾಣವನ್ನು ಖುದ್ದಾಗಿ ಪರಿಶೀಲಿಸಿ ಹೆಚ್ಚು ಹಾಲು ಕೊಡುವ ಹೈನುರಾಸುಗಳನ್ನು ಖರೀದಿಸಬೇಕು. ಹೈನುರಾಸುಗಳ ಆಯ್ಕೆ ಮಾಡುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಬೇಕು.

  1. ಮಿಶ್ರತಳಿ ರಾಸುಗಳಲ್ಲಿ ಜರ್ಸಿ / ಹೆಚ್.ಎಫ್.ತಳಿ ಶೇ. 50-65.50 ರಷ್ಟು ವಿದೇಶಿ ಅನುವಂಶಿಯ ಗುಣವಿರುವ ರಾಸು ಸೂಕ್ತ.
  2. ಇತ್ತೀಚೆಗೆ ಕರು ಹಾಕಿದ ರಾಸುಗಳನ್ನು ಆಯ್ಕೆ ಮಾಡಬೇಕು.
  3. 3-4 ಹಲ್ಲಿನ, 1-3 ಸೂಲಿನೊಳಗಿನ ರಾಸುಗಳನ್ನು ಖರೀದಿಸುವುದು ಉತ್ತಮ.
  4. ಹೈನು ರಾಸು ಖರೀದಿಸುವಾಗ ಅದು ಕರೆಯುವ ಹಾಲಿನ ಉತ್ಪಾದನೆಯನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿ ಆ ರಾಸುವನ್ನು ಮೂರು ಬಾರಿ ಅಂದರೆ ಒಂದು ಸಂಜೆ, ಮರುದಿನ ಮುಂಜಾನೆ ಮತ್ತು ಸಂಜೆ ಹಾಲು ಕರೆದು ನೋಡಬೇಕು.
  5. ಹೈನುರಾಸುಗಳಿಗೆ ಶಕ್ತಿಯುತವಾದ ದವಡೆ, ಒಸಡು ಮತ್ತು ಹಲ್ಲುಗಳನ್ನು ಹೊಂದಿರಬೇಕು.
  6. ಕಾಂತಿಯುಕ್ತ ಕಣ್ಣುಗಳು, ವಿಶಾಲವಾದ ಮೂಗಿನ ಹೊಳ್ಳೆ ಹೈನುರಾಸುಗಳ ಆರೋಗ್ಯವನ್ನು ಸೂಚಿಸುತ್ತವೆ.
  7. ಕತ್ತು ಸಣ್ಣವಾಗಿದ್ದರೂ ನೀಳವಾಗಿರಬೇಕು. ಬೆನ್ನು ಸಮಮಟ್ಟವಾಗಿರಬೇಕು.
  8. ರಾಸುವಿನ ಶರೀರವು ಕೊಬ್ಬಿನಿಂದ ತುಂಬಿರಬಾರದು, ಕಾಲುಗಳು ಗಿಡ್ಡವಾಗಿದ್ದು ನೇರವಾದ ಹಿಂಗಾಲು ಮತ್ತು ಸದೃಡವಾದ ಮುಂಗಾಲು ಮತ್ತು ಗಟ್ಟಿಯಾದ ಗೊರಸುಗಳಿರಬೇಕು.
  9. ಸೌಮ್ಯ ಸ್ವಭಾವವಿರಬೇಕು.
  10. ಮೃದುವಾದ ಕೂದಲು ಮತ್ತು ನುಣಪಾದ ಚರ್ಮ ಹೊಂದಿರಬೇಕು.
  11. ಹೊಟ್ಟೆ ಮತ್ತು ಎದೆಗುಂಡಿಗೆ ದೊಡ್ಡದಿರಬೇಕು.
  12. ಕೆಚ್ಚಲ ಮೇಲೆ ಮತ್ತು ಕೆಚ್ಚಲು ಮುಂದಿನ ರಕ್ತನಾಳಗಳು (ಹಾಲಿನ ನರ) ಕಣ್ಣಿಗೆ ಕಾಣುವಂತೆ ದೊಡ್ಡದಾಗಿರಬೇಕು.
  13. ಮೊಲೆಯ ತೊಟ್ಟುಗಳು ಸಮನಾಗಿದ್ದು ದೊಡ್ಡದಾಗಿರಬೇಕು. ಹಾಲು ಕರೆದ ನಂತರ ಕೆಚ್ಚಲು ಕುಗ್ಗಬೇಕು.
  14. ಅತೀ ದಪ್ಪ ಅಥವಾ ತೀರಾ ಸಣ್ಣ ಗಾತ್ರದ ಹಸುಗಳು ಹೈನುಗಾರಿಕೆಗೆ ಯೋಗ್ಯವಲ್ಲ ಹಸುವು ಮಧ್ಯಮ ಗಾತ್ರದ್ದಾಗಿರಬೇಕು, ಸರಾಗವಾಗಿ ಓಡಾಡಬೇಕು.
  15. ಎರಡು ಹಿಂಗಾಲುಗಳ ಅಂತರ ಅಗಲವಾಗಿರಬೇಕು.
  16. ರಾಸುವಿನ ಬೆಲೆಯನ್ನು ಹಾಲಿನ ಇಳುವರಿ, ರಾಸುವಿನ ವಯಸ್ಸು, ಸೂಲಿನ ಸಂಖ್ಯೆ ಮತ್ತು ಕರಾವಿನ ಹಂತದ ಮೇಲೆ ನಿರ್ಧರಿಸಬೇಕು.
  17. ಗರ್ಭದ ರಾಸು ಆಗಿದ್ದಲ್ಲಿ ಪಶುವೈದ್ಯರಿಂದ ಫಲಪರೀಕ್ಷೆ ಮತ್ತು ಕೆಚ್ಚಲು ಪರೀಕ್ಷೆ ಮಾಡಿಸಿಕೊಳ್ಳಬೇಕು.
  18. ರಾಸುಗಳ ಆಯ್ಕೆ ಮಾಡುವಾಗ ಹೈನುಗಾರಿಕೆಯ ಅಂಕಿ ಅಂಶಗಳ ಪಾತ್ರವು ಕೂಡ ಮುಖ್ಯ. ಫಲಕ್ಕೆ ಬಂದ ದಿನ, ಕರು ಹಾಕಿದ ದಿನ, ಹಾಲಿನ ಉತ್ಪಾದನೆ, ವಯಸ್ಸು ಇತ್ಯಾದಿ ಅಂಕಿ ಅಂಶಗಳನ್ನ ಗಮನಿಸಿ ಆಯ್ಕೆ ಮಾಡಬೇಕು. ಈ ಮಾಹಿತಿ ಲಭ್ಯವಿಲ್ಲದಾಗ ದೇಹದ ಎತ್ತರ, ದೇಹದ ತೂಕ ಮುಂತಾದ ಅಂಶಗಳನ್ನು ಗಮನಿಸಬೇಕು.
Responsive image Responsive image