ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಸಮಯದಲ್ಲಿ ತಾಪಮಾನ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ರೈತಬಾಂಧವರು ಜಾನುವಾರುಗಳು ಮುಖ್ಯವಾಗಿ ಆಕಳು (ಹಸು) ಮತ್ತು ಎಮ್ಮೆಗಳ ವಿಶೇಷ ಪಾಲನೆ ಮತ್ತು ಪೋಷಣೆ ಮಾಡಲೇಬೇಕಾಗುತ್ತದೆ. ಬೇಸಿಗೆಯಲ್ಲಿ ಇಳುವರಿ ಶೇ. 20-25 ರಷ್ಟು ಕಡಿಮೆಯಾಗುವ ಸಾಧ್ಯತೆಗಳಿರುವುದರಿಂದ ರೈತರಿಗೆ ಈ ಕುರಿತು ವಿಶೇಷ ಮಾಹಿತಿ ಇರಬೇಕು.
ಆಕಳು (ಹಸು) ಮತ್ತು ಎಮ್ಮೆಗಳು ಬಿಸಿರಕ್ತದ ಪ್ರಾಣಿಗಳಾಗಿರುವುದರಿಂದ ತಮ್ಮ ದೇಹದ ತಾಪಮಾನವನ್ನು ಒಂದೇ ತರಹವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ಬೇಸಿಗೆಯಲ್ಲಿ ವಾತಾವರಣದ ತಾಪಮಾನ ಹೆಚ್ಚುವುದರಿಂದ ರಾಸುಗಳಿಗೆ ತುಂಬ ಕಷ್ಟವಾಗುವದು. ಬೆವರಿನ ಮೂಲಕ ರಾಸುಗಳು ತಮ್ಮ ದೇಹವನ್ನು ತಂಪಾಗಿಸಿಕೊಳ್ಳಬಹುದು. ಆದರೆ ಎಮ್ಮೆಗಳಲ್ಲಿ ಬೆವರಿನ ಗ್ರಂಥಿಗಳು ಕಡಿಮೆಯಿರುವುದರಿಂದ ಅವುಗಳು ಬೇಸಿಗೆಯಲ್ಲಿ ಹೆಚ್ಚಿನ ಕಷ್ಟಪಡುತ್ತವೆ. ಸುಮಾರು 15 ರಿಂದ 320 ಸೆಲ್ಸಿಯಸ್ನಲ್ಲಿ ಎಮ್ಮೆಗಳು ಚೆನ್ನಾಗಿ ಉತ್ಪಾದಿಸುತ್ತವೆ. ಆದರೆ ತಾಪಮಾನ ಹೆಚ್ಚಿದಂತೆಲ್ಲ ಅವುಗಳ ಕ್ಷಮತೆ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳ ದೇಹದ ಇನ್ನೂ ಇತರ ಚಟುವಟಿಕೆಗಳಲ್ಲಿ ತುಂಬಾ ಬದಲಾವಣೆಗಳು ಕಂಡುಬರುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ:
- ಬೆವರಿನ ಮೂಲಕ ಹೆಚ್ಚಿನ ತಾಪಮಾನವನ್ನು ಹೊರಹಾಕುತ್ತವೆ.
- ಹೆಚ್ಚು ನೀರು ಕುಡಿಯುತ್ತವೆ.
- ಆಹಾರ ಸೇವನೆ ಕಡಿಮೆಯಾಗುತ್ತದೆ.
- ನಾಲಿಗೆ ಹೊರಚಾಚಿ ಉಸಿರಾಡುತ್ತವೆ ಮತ್ತು ತೇಗುತ್ತವೆ.
- ನೆರಳಿನಲ್ಲಿರಲು ಇಷ್ಟಪಡುತ್ತವೆ.
- ಕಡಿಮೆ ಹಾಲು ನೀಡುತ್ತವೆ.
- ರಾಸುಗಳ ಬೆದೆಯಲ್ಲಿ ಏರು-ಪೇರು ಆಗುವದು.
ಇಂತಹ ಬದಲಾವಣೆ ಮತ್ತು ಸಮಸ್ಯೆಗೆ ಸ್ಪಂದಿಸಲು ಕೆಲವು ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡರೆ, ರಾಸುಗಳು ಆರೋಗ್ಯವಂತವಾಗಿದ್ದು ಹೆಚ್ಚಾಗಿ ಉತ್ಪಾದಿಸುತ್ತವೆ.
ಕೊಟ್ಟಿಗೆ ನಿರ್ವಹಣೆ :
- ಸಾಧ್ಯವಾದಷ್ಟು ಜಾನುವಾರುಗಳಿಗೆ ಎತ್ತರವಾದ ಛಾವಣಿ ಇರುವ ಒಳ್ಳೆಯ ಕೊಠಡಿ (ಕೊಟ್ಟಿಗೆ) ಇರಬೇಕು.
- ಸೂರ್ಯನ ಕಿರಣಗಳು ನೇರವಾಗಿ ದನಗಳ ಕೊಠಡಿಯಲ್ಲಿ ಬಿಳುವುದನ್ನು ತಡೆಗಟ್ಟಲು ದನಗಳ ಕೊಠಡಿ ಪೂರ್ವ - ಪಶ್ಚಿಮ ದಿಕ್ಕಿಗೆ ಇರಬೇಕು.
- ಕೊಠಡಿಯ ಛಾವಣಿಯ ಕೆಳ ಭಾಗ ಕಪ್ಪು ಬಣ್ಣದಾಗಿರಬೇಕು ಹಾಗೂ ಮೇಲ್ಭಾಗ ಬಿಳಿ ಬಣ್ಣದಾಗಿರಬೇಕು.
- ದನಗಳ ಕೊಟ್ಟಿಗೆಯಲ್ಲಿ ಫ್ಯಾನ್ಗಳನ್ನು ಅಳವಡಿಸಿದರೆ ಉತ್ತಮ. ಇಲ್ಲದಿದ್ದರೆ ಕಿಡಕಿಗಳಿಗೆ ಗೋಣಿ ಚೀಲಗಳನ್ನು ಕಟ್ಟಿ ತಂಪಾದ ನೀರನ್ನು ಸಿಂಪಡಿಸುತ್ತಿರಬೇಕು.
- ಜಾನುವಾರುಗಳು ಮುಖ್ಯವಾಗಿ ಎಮ್ಮೆಗಳ ಮೇಲೆ ಸದಾ ನೀರನ್ನು ಸಿಂಪಡಿಸುತ್ತಿರಬೇಕು. ಇಲ್ಲದಿದ್ದರೆ, ಗ್ರಾಮದಲ್ಲಿ ನೀರಿನ ಹೊಂಡವಿದ್ದರೆ ಉತ್ತಮ.
- ಜಾನುವಾರುಗಳ ಕೊಟ್ಟಿಗೆಯ ಸುತ್ತಮುತ್ತಲೂ ಗಿಡಮರಗಳು ಇರಬೇಕು.
ಆಹಾರ ನಿರ್ವಹಣೆ:
- ಕುಡಿಯಲು ಜಾನುವಾರುಗಳಿಗೆ ಇಷ್ಟದಂತೆ ಸಾಕಷ್ಟು ತಂಪಾದ ಹಾಗೂ ಶುಧ್ಧವಾದ ನೀರನ್ನು ಒದಗಿಸಬೇಕು.
- ದಿನದ ಗರಿಷ್ಟ ಉಷ್ಣತೆಯ ಅವಧಿಯಲ್ಲಿ ಸೂರ್ಯನ ಕಿರಣಗಳು ಪ್ರಖರವಾಗಿರುವಾಗ ಹೊರಗಡೆ ಮೇಯಲು ಬಿಡಬಾರದು. ರಾಸುಗಳನ್ನು ಸಾಧ್ಯವಾದಷ್ಟು ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಮೇಯಲು ಬಿಡಬೇಕು.
- ದಿನದ ತಂಪು ಹೊತ್ತಿನಲ್ಲಿ ಮೇವು, ಹಿಂಡಿ ಕೊಡಬೇಕು.
- ದನಗಳಿಗೆ ಹೆಚ್ಚಾಗಿ ಹಸಿರು ಮೇವನ್ನು ಕೊಡಬೇಕು.
- ಹೆಚ್ಚು ಹಾಲು ಉತ್ಪಾದಿಸುವ ದನಗಳಿಗೆ ಹೆಚ್ಚು ಸಸಾರಜನಕ ಇರುವ ಆಹಾರವನ್ನು ಒದಗಿಸಬೇಕಾಗಿರುತ್ತದೆ. ಇಂತಹ ಆಹಾರಗಳೆಂದರೆ, ದ್ವಿದಳ ಧಾನ್ಯಗಳ ಹೊಟ್ಟು (ಉದಾ: ಶೇಂಗಾ ಹೊಟ್ಟು, ಕಡಲೆ ಹೊಟ್ಟು, ಕುದರೆ ಮೆಂತೆ ಮೇವು, ಅಲಸಂದೆ ಮೇವು), ಎಣ್ಣೆ ಕಾಳುಗಳ ಹಿಂಡಿಗಳು ಮತ್ತು ಬೇಳೆ ಕಾಳುಗಳು. ಇವುಗಳನ್ನು ದನಗಳಿಗೆ ಸಾಮಾನ್ಯ ಋತುಗಳಿಗಿಂತ ಬೇಸಿಗೆಯಲ್ಲಿ ಹೆಚ್ಚಿಗೆ ಕೊಡಬೇಕು.
- ಮುಖ್ಯವಾದ ಜೀವಸತ್ವಗಳನ್ನು (ಉದಾ: ವಿಟಮಿನ್ ಸಿ ಮತ್ತು ಬಿ-ಕಾಂಪ್ಲೆಕ್ಸ್) ದನಗಳಿಗೆ ತಿನ್ನಿಸುವುದರಿಂದ ಬೇಸಿಗೆಯ ಬೇಗೆಯಿಂದ ಕುಂಠಿತವಾಗುವ ಎಮ್ಮೆಗಳ ಉತ್ಪಾದನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು.
- ಒಣ ಮೇವುಗಳನ್ನು ಹಾಗೆಯೇ, ರಾಸುಗಳಿಗೆ ನೀಡುವ ಬದಲು ಪರಿಷ್ಕರಿಸಿದ ಹುಲ್ಲನ್ನು ನೀಡುವುದರಿಂದ ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ. ಪಶುವೈದ್ಯರ ಸಲಹೆಯಂತೆ ಯೂರಿಯಾದಿಂದ ಒಣ ಮೇವನ್ನು ಪೌಷ್ಠೀಕರಿಸಿ ರಾಸುಗಳಿಗೆ ತಿನ್ನಿಸುವುದರಿಂದ ಸಸಾರಜನಕ ಪ್ರಮಾಣ ಹೆಚ್ಚುವುದಲ್ಲದೇ ಜಾನುವಾರುಗಳ ಮೇವಿನ ಸೇವನೆ ಹೆಚ್ಚುತ್ತ ಹಾಲು ಉತ್ಪಾದನೆ ಅಧಿಕಗೊಳ್ಳುತ್ತದೆ.
ಆರೋಗ್ಯ ನಿರ್ವಹಣೆ
- ಬೇಸಿಗೆಯಲ್ಲಿ ದನಗಳ ದೇಹದ ಶಾರೀರಿಕ ಕ್ರಿಯೆಗಳಲ್ಲಿ ಏರು ಪೇರು ಉಂಟಾಗಿ ಒತ್ತಡದಿಂದಾಗಿ ಅವುಗಳ ರೋಗನಿರೋಧಕ ಶಕ್ತಿ ಕುಗ್ಗುವ ಸಾಧ್ಯತೆಗಳಿರುತ್ತವೆ.
- ಬೇಸಿಗೆಯ ಒತ್ತಡದಿಂದ ದನಗಳ ರಸವಾಹಕ (ಹಾರ್ಮೋನ್)ಗಳಲ್ಲಿ ವ್ಯತ್ಯಾಸವಾಗಿ ಅವುಗಳ ಸಂತಾನೋತ್ಪತ್ತಿಯಲ್ಲಿ ಏರು ಪೇರುಗಳಾಗಬಹುದು. ಇದರಿಂದ ರಾಸುಗಳು ಬೆದೆಗೆ ಬರುವದು ಕಡಿಮೆಯಾಗುತ್ತದೆ.
- ಎಮ್ಮೆಗಳಲ್ಲಿ ಮೂಕಬೆದೆಯ ಲಕ್ಷಣಗಳು ಮುಖ್ಯವಾಗಿ ಕಂಡುಬರುತ್ತವೆ. ಆದಕಾರಣ ದನಗಳನ್ನು ಬೆದೆಯ ಲಕ್ಷಣಗಳಿಗಾಗಿ ಗಮನಿಸುತ್ತಿರಬೇಕು.
- ಬೇಸಿಗೆಯಲ್ಲಿ ಗರ್ಭಧರಿಸಿದ ರಾಸುಗಳು ಮತ್ತು ಕರುಗಳ ಪಾಲನೆಯ ಬಗ್ಗೆ ತುಂಬಾ ಗಮನಹರಿಸಬೇಕು.
ಈ ಎಲ್ಲ ಅಂಶಗಳು ಬೇಸಿಗೆಯ ಒತ್ತಡದಿಂದಾಗುವ ನಷ್ಟವನ್ನು ತಡೆಗಟ್ಟುವಲ್ಲಿ ಸಹಕಾರಿಯಾಗುತ್ತವೆ. ಈ ಅಂಶಗಳನ್ನು ಪಾಲಿಸುವುದರಿಂದ ಬೇಸಿಗೆಯಲ್ಲಿ ಹೈನುರಾಸುಗಳ ಪಾಲನೆಯನ್ನು ಮಾಡುವುದಷ್ಟೆಯಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದಿಸಬಹುದು. ರೈತರು ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳಿದ್ದರೆ ಹತ್ತಿರದ ಪಶುವೈದ್ಯರನ್ನು ಅಥವಾ ಪಶುವೈದ್ಯಕೀಯ ಮಹಾವಿದ್ಯಾಲಯದ ಅಧಿಕಾರಿಗಳನ್ನು ಸಂಪರ್ಕಿಸಬಹುದು.