ಮಿಶ್ರತಳಿ ರಾಸುಗಳ ಪಾಲನೆ
- ಮಿಶ್ರತಳಿ ರಾಸು ತರುವ ಮುನ್ನ ಹಸಿರು ಮೇವಿನ ವ್ಯವಸ್ಥೆ ಅವಶ್ಯಕ.
- ಸಾಧ್ಯವಾದರೆ ಪ್ರತಿದಿನ ಮೈ ತೊಳೆಯಬೇಕು.
- ಒಣಮೇವು ಪ್ರತಿ ದಿನ 5-6 ಕೆ.ಜಿ. ನೀಡಬೇಕು (ಯೂರಿಯಾ ಪೌಷ್ಟೀಕರಿಸಿದ ಒಣ ಹುಲ್ಲು, ನೆಲ್ಲು ಹುಲ್ಲು ನೀಡುವುದು ಉತ್ತಮ)
- ಹಸಿರು ಮೇವು - ಎಕದಳ 15-20 ಕೆ.ಜಿ. ದಿನಕ್ಕೆ, ದ್ವಿದಳ 8-10 ಕೆ.ಜಿ. ಒಂದು ದಿನಕ್ಕೆ ನೀಡಬೇಕು.
- ಪಶು ಆಹಾರ ದೇಹದ ನಿರ್ವಹಣೆಗೆ 2 ಕೆ.ಜಿ. ಹಾಗೂ ಪ್ರತಿ ಲೀ. ಹಾಲಿಗೆ 400 ಗ್ರಾಂ ನಂತೆ ನೀಡಬೇಕು.
- ಜಂತು ನಿರ್ವಹಣೆಗೆ ನಿರ್ದಿಷ್ಟವಾದ ಸಮಯದಲ್ಲಿ ಜಂತು ನಿವಾರಕಗಳನ್ನು ನೀಡುವುದು ಅವಶ್ಯಕ.
- ಉಣ್ಣೆ, ಚಿಗಟ, ಹೇನು ಹಾಗೂ ಸೊಳ್ಳೆಗಳನ್ನು ನಿಯಂತ್ರಿಸುವುದರಿಂದ ಮಿಶ್ರತಳಿ ರಾಸುಗಳನ್ನು ಹೆಚ್ಚಾಗಿ ಕಾಡುವ ಥೈಲೇರಿಯಾ ಹಾಗೂ ಬೆಬೀಸಿಯಾ ಕಾಯಿಲೆಗಳಿಂದ ತಡೆಗಟ್ಟಬಹುದು.
- ಕೆಚ್ಚಲನ್ನು ಹಾಲು ಕರೆಯುವ ಮುಂಚೆ ಹಾಗೂ ಕರೆದ ನಂತರ ಶುದ್ಧ ನೀರಿನಿಂದ ತೊಳೆಯಬೇಕು. ಹಾಗೂ ಒರೆಸಬೇಕು. ಹಾಲು ಕರೆದ ನಂತರ ಸಾಫ್ ಕಿಟ್ ಸ್ಟ್ರೇ ಮಾಡುವುದರಿಂದ ಕೆಚ್ಚಲು ಬಾವು ಬರುವುದನ್ನು ತಡೆಯಬಹುದು.
- ಲಸಿಕೆಗಳನ್ನು ಕರುಗಳಿಗೆ 5-6 ತಿಂಗಳ ನಂತರ ಕಾಲ ಕಾಲಕ್ಕೆ ಕೊಡಿಸಬೇಕು.
- ಕರು ಹಾಕಿದ 40-50 ದಿನಕ್ಕೆ ರಾಸು ಪುನ: ಬೆದೆಗೆ ಬರಬೇಕು. ಆ ಸಮಯದಲ್ಲಿ ಕೃತಕ ಗರ್ಭಧಾರಣೆ ಮಾಡಿಸಬೇಕು. ಬೆದೆಗೆ ಬಾರದಿದ್ದಲಿ ಪಶುವೈದ್ಯರ ಸಲಹೆ ಪಡೆಯಬೇಕು.
- ಹಸುವಿಗೆ ಕೃತಕ ಗರ್ಭಧಾರಣೆ ಮಾಡಿಸಿದ ನಂತರ 3ನೇ ತಿಂಗಳಲ್ಲಿ ಗರ್ಭ ಪರೀಕ್ಷೆ ಮಾಡಿಸಬೇಕು.
- ಪ್ರತಿದಿನ 40-50 ಗ್ರಾಂ ಖನಿಜ ಮಿಶ್ರಣವನ್ನು ಪಶು ಆಹಾರದೊಡನೆ ಕೊಡಬೇಕು.
ಗರ್ಭಧರಿಸಿದ ರಾಸುಗಳ ಪಾಲನೆ
- ಗರ್ಭಧರಿಸಿದ್ದು ಖಾತ್ರಿಯಾದ ಮೇಲೆ 5ನೇ ತಿಂಗಳಿಂದ ದಿನವೊಂದಕ್ಕೆ 1/2 ಕೆ.ಜಿ. ಪಶು ಆಹಾರ ಮಾಮೂಲಿಗಿಂತ ಹೆಚ್ಚಿಗೆ ನೀಡಬೇಕು. 7ನೇ ತಿಂಗಳಿನಿಂದ ರಾಸಿಗೆ ಮಾಮೂಲಿಗಿಂತ 1 ಕೆ.ಜಿ. ಪಶು ಆಹಾರ ಹೆಚ್ಚಿಗೆ ನೀಡಬೇಕು. ಇದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಕರುವಿಗೆ ಹೆಚ್ಚಿನ ಪೌಷ್ಠಿಕಾಂಶ ದೊರೆಯುವುದಲ್ಲದೆ ಮುಂದಿನ ಕರಾವಿನಲ್ಲಿ ಹಾಲಿನ ಇಳುವರಿ ಹೆಚ್ಚಾಗುವುದು ಮತ್ತು ಸಕಾಲದಲ್ಲಿ ಬೆದೆಗೆ ಬರಲು ಅನುಕೂಲವಾಗುವುದು.
- ಗರ್ಭಧರಿಸಿದ ರಾಸಿಗೆ 5ನೇ ತಿಂಗಳಿನಲ್ಲಿ ಜಂತು ನಿವಾರಕ ಔಷಧಿ ನೀಡಬೇಕು.
- ಗರ್ಭಧರಿಸಿದ ರಾಸಿಗೆ ಎಲ್ಲಾ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು.
- ಎಂಟು ತಿಂಗಳ ಗರ್ಭದ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಕೆಚ್ಚಲನ್ನು ಮೃದುವಾಗಿ ತೀಡಿದರೆ ಕೆಚ್ಚಲು ಬೆಳೆಯುತ್ತದೆ. ಮೊಳಕೆ ಒಡೆದಿರುವ ಹುರುಳಿಕಾಳು ಚೆನ್ನಾಗಿ ರುಬ್ಬಿ ಬೆಲ್ಲ ಅಥವಾ ಉಪ್ಪು ಹಾಕಿ ಬೇಯಿಸಿ ದಿನಕ್ಕೆ ಒಂದು ಕೆ.ಜಿ. ಯಂತೆ ಇಪ್ಪತ್ತು ದಿನಗಳಲ್ಲಿ ಇಪ್ಪತ್ತು ಕೆ.ಜಿ. ಕೊಡಬೇಕು. ಹೀಗೆ ಮಾಡಿದರೆ ಕರು ಹಾಕಿದ ನಂತರ ಕಸ (ಮಾಸ) ಬೇಗ ಹೊರಬೀಳುತ್ತದೆ. ಗರ್ಭಕೋಶ ಬೇಗನೆ ಇಂಗಿ, ಕೀವು ತುಂಬುವುದಿಲ್ಲ. ಹಾಲಿನ ಇಳುವರಿಗೆ ಧಕ್ಕೆ ಆಗುವುದಿಲ್ಲ.
- ರಾಸು ಮಲಗುವ ಜಾಗ ಸ್ವಚ್ಛವಾಗಿರಬೇಕು ಹಾಗೂ ಹುಲ್ಲು ಹಾಸಿಗೆಯ ವ್ಯವಸ್ಥೆ 8 1/2 ತಿಂಗಳಿಂದಲೇ ಮಾಡುವುದು ಸೂಕ್ತ. ಗರ್ಭವಿರುವ ರಾಸುವನ್ನು ಬೇರೆಯಾಗಿ ಕಟ್ಟಬೇಕು.
- ಏಳನೇ ತಿಂಗಳ ನಂತರ ಹಾಲು ಕರೆಯುವುದನ್ನು ಕ್ರಮೇಣವಾಗಿ ನಿಲ್ಲಿಸಬೇಕು. ಕೆಲವು ಹಸುಗಳು ಏಳು ತಿಂಗಳ ಗರ್ಭದ ಸಮಯದಲ್ಲೂ ಹೆಚ್ಚು ಹಾಲು ಕೊಡುತ್ತಿರುತ್ತವೆ. ಅಂತಹ ಸಮಯದಲ್ಲಿ ಹಸಿರು ಮೇವು, ಪಶು ಆಹಾರವನ್ನು ಪೂರ್ತಿಯಾಗಿ ನಿಲ್ಲಿಸಿ, ಅವುಗಳಿಗೆ ಸಾಮಾನ್ಯವಾಗಿ ಕೊಡುವ 1/2 ಭಾಗದಷ್ಟು ಮಾತ್ರ ಕೊಡಬೇಕು. ಈ ರೀತಿ ಮೂರು / ನಾಲ್ಕು ದಿನಗಳು ಮಾಡಿ, ಹಾಗೂ ಮೊದಲನೇ ದಿನ ಕೆಚ್ಚಲಲ್ಲಿ ಇರುವ ಹಾಲನ್ನು ತೆಗೆಯಬೇಕು. ಕೊನೆಯ ದಿನ ಕೆಚ್ಚಲ ಬಾವು (ಮ್ಯಾಸ್ಟಯಿಟಿಸ್) ಬರದ ಹಾಗೆ ಔಷಧಿಯನ್ನು ಕೆಚ್ಚಲ ಒಳಗೆ ಹಾಕಬೇಕು.
- ಗರ್ಭಧರಿಸಿದ ರಾಸನ್ನು ಗಾಳಿ, ಬೆಳಕು ಬರುವಂತಹ ಪ್ರತ್ಯೇಕ ಕೊಠಡಿಯಲ್ಲಿ ಕಟ್ಟಬೇಕು.
- ಗರ್ಭಧರಿಸಿದ ರಾಸಿಗೆ ಪ್ರತಿ ನಿತ್ಯ ಕುಡಿಯಲು ಸ್ವಚ್ಛವಾದ ನೀರು, ಸಮತೋಲನ ಪಶು ಆಹಾರ, ಖನಿಜ ಮಿಶ್ರಣ, ಹಸಿರು ಮೇವು, ಒಣಮೇವು ಸಾಕಷ್ಟು ಪ್ರಮಾಣದಲ್ಲಿ ನೀಡಬೇಕು.
- ಹೈನುಗಾರಿಕೆಯಲ್ಲಿ ಲಾಭ ಪಡೆಯಬೇಕಾದರ ವರ್ಷಕ್ಕೆ ಒಂದು ಕರುವನ್ನು ಪಡೆಯಬೇಕು.
ಕರುಗಳ ಪಾಲನೆ
ಕರು ಹಾಕುವ ಮೊದಲನೆಯ ಹಂತದಲ್ಲಿ ಸಾಮಾನ್ಯವಾಗಿ ಅದು ಹೊಟ್ಟೆಯನ್ನು ಪದೇ ಪದೇ ಕುಗ್ಗಿಸುವುದನ್ನು ನೋಡಬಹುದು. ಈ ಸಮಯದಲ್ಲಿ ಮಡಿಲಿನಿಂದ ನೀಲಿ ಬಣ್ಣದ ಮಾಸದ ಚೀಲ ಹೊರಗೆ ಕಂಡುಬರುತ್ತದೆ. ಈ ಅವಧಿ ಸಾಮಾನ್ಯವಾಗಿ 4 ರಿಂದ 8 ಘಂಟೆಗಳು ಇರುತ್ತದೆ. ನಂತರ ಹಳದಿ ಬಣ್ಣದ ಮಾಸದ ಚೀಲ ಕಂಡುಬರುತ್ತದೆ. ಈ ಚೀಲ ಒಡೆದ ನಂತರ ಎಮ್ಮೆಗಳಲ್ಲಿ ಒಂದು ಕಾಲು ಗಂಟೆ ಒಳಗಾಗಿ, ಹಸುಗಳಲ್ಲಿ ನಾಲ್ಕು ಗಂಟೆ ಒಳಗಾಗಿ ಕರುವು ಪೂರ್ತಿಯಾಗಿ ಹೊರಗೆ ಬರಬೇಕು. ಹಾಗೆ ಬಾರದೇ ಇದ್ದ ಪಕ್ಷದಲ್ಲಿ ಕರುವು ಬರಲು ಅಡಚಣೆ ಆಗಿರುತ್ತದೆ ಮತ್ತು ಪಶುವೈದ್ಯರ ಸಹಾಯ ಪಡೆಯಬೇಕು.
- ತಾಯಿಯ ಗರ್ಭಕೋಶದಿಂದ ಹೊರಬಂದ ನಂತರ ಕರುವಿನ ಮೇಲಿನ ಲೋಳೆಯನ್ನು ತಕ್ಷಣ ಒರೆಸಬೇಕು. ಅದರಲ್ಲೂ ಮೂಗಿನ ಸುತ್ತ ಕೂಡಲೇ ಒರೆಸಬೇಕು ನಂತರ ತಾಯಿಯನ್ನು ನೆಕ್ಕಲು ಬಿಡಬೇಕು. ಇದರಿಂದ ಕರುವಿನ ಪ್ರಥಮ ಉಸಿರಾಟಕ್ಕೆ ಅನುಕೂಲವಾಗುವುದು.
- ಕರುವಿನ ಹೊಕ್ಕಳ ಬಳ್ಳಿಯನ್ನು ಬುಡದಿಂದ 1 ಇಂಚು ಕೆಳಗೆ ದಾರದಿಂದ ಕಟ್ಟಬೇಕು. ನಂತರ ದಾರದ ಗಂಟಿನಿಂದ ಒಂದು ಇಂಚು ಕೆಳಗೆ ಹೊಕ್ಕಳ ಬಳ್ಳಿ ಕತ್ತರಿಸಿ ಟಿಂಚರ್ ಅಯೋಡಿನ್ ಹಚ್ಚಬೇಕು. ಇದರಿಂದ ಹೊಕ್ಕಳ ಹುಣ್ಣನ್ನು ನಿಯಂತ್ರಿಸಬಹುದು.
- ಕರು ಜನಿಸಿದ 30 ನಿಮಿಷದೊಳಗೆ ಕರುವಿಗೆ ಸಾಕಷ್ಟು ಗಿಣ್ಣದ ಹಾಲು ನೀಡಬೇಕು ಹಾಗೂ ಕರುವನ್ನು ಮೂರು ದಿನಗಳ ನಂತರ ಬೇರ್ಪಡಿಸಿ ಕರುವಿನ ತೂಕದ 1/10 ಭಾಗದಷ್ಟು ಹಾಲನ್ನು ದಿನಕ್ಕೆ ನೀಡಬೇಕು. (ಉದಾ: 20 ಕೆ.ಜಿ. ತೂಕದ ಕರುವಿಗೆ 2 ಲೀ. 30 ಕೆ.ಜಿ. ತೂಕದ ಕರುವಿಗೆ 3 ಲೀ) ದಿನದಲ್ಲಿ 3-4 ಬಾರಿ ಗಿಣ್ಣು ಹಾಲನ್ನು ಕುಡಿಸಬೇಕು.
- ಕರು ಜನಿಸಿದ 10ನೇ ದಿನದಲ್ಲಿ ಜಂತು ನಾಶಕ ಔಷಧಿ ನೀಡಬೇಕು.
- ಕರು ಜನಿಸಿದ 10-15 ದಿನಗಳಲ್ಲಿ ಕೊಂಬು ಸುಡಿಸಬಹುದು.
- ಕರು ಜನಿಸಿದ 15ನೇ ದಿನದಲ್ಲಿ 100 ಗ್ರಾಂ ಪಶು ಆಹಾರ, ನಂತರ ಪ್ರತಿದಿನ 10 ಗ್ರಾಂ ಹೆಚ್ಚಿಸುತ್ತಾ 2 ಕೆ.ಜಿ. ಪಶು ಆಹಾರ ತಲುಪುವವರೆಗೆ ನೀಡಿ ಅದನ್ನೇ ಮುಂದುವರೆಸಬೇಕು.
- ಕರು ಹುಟ್ಟಿದ 4ನೇ ವಾರದಲ್ಲಿ ಹಸಿರು ಹುಲ್ಲು ತಿನ್ನಲು ಪ್ರಾರಂಭಿಸುತ್ತದೆ. ಕರುವಿಗೆ 4-5 ತಿಂಗಳಾದ ನಂತರ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆಯನ್ನು 15 ದಿನಗಳ ಅಂತರದಲ್ಲಿ ಕೊಡಿಸಬೇಕು.
ಹಾಲು ಹಿಂಡುವ ದನಗಳ ಪಾಲನೆ
- ಹಾಲು ಹಿಂಡುವ ಮೊದಲು ಜಾನುವಾರುಗಳ ಮೈಯನ್ನು ಮತ್ತು ಕೊಟ್ಟಿಗೆಯನ್ನು ಪ್ರತಿದಿನ ಚೆನ್ನಾಗಿ ತೊಳೆಯಬೇಕು. ಕೊಟ್ಟಿಗೆಯು ಒಣಗಿರಬೇಕು. ಇದರಿಂದ ಕೆಚ್ಚಲು ಬಾವುರೋಗವನ್ನು ತಡೆಗಟ್ಟಬಹುದು.
- ನಿಗದಿತ ಸಮಯದಲ್ಲಿಯೇ ಹಾಲನ್ನು ಹಿಂಡುವುದರಿಂದ ಹಾಲಿನ ಇಳುವರಿಯು ಉತ್ತಮವಾಗಿರುತ್ತದೆ. ಹತ್ತು ಲೀಟರಗಿಂತ ಹೆಚ್ಚು ಹಾಲು ಕೊಡುವ ಮಿಶ್ರತಳಿ ಹಸುಗಳನ್ನು ದಿನಕ್ಕೆ ಮೂರು ಬಾರಿ ಹಿಂಡುವುದು ಉತ್ತಮ.
- ಹಾಲು ಹಿಂಡುವ ಮೊದಲು ಜಾನುವಾರಿನ ಕೆಚ್ಚಲನ್ನು ಹಿಂಡುವವರು ಕೈಗಳನ್ನು ಚೆನ್ನಾಗಿ ತೊಳೆಯಬೇಕು. ಹಿಂಡುವಾಗ ಮೊಲೆಗೆ ಬೆಣ್ಣೆ ಅಥವಾ ಎಣ್ಣೆ ಪದಾರ್ಥಗಳನ್ನು ಹಚ್ಚಬಾರದು. ಹಾಲನ್ನು ಪೂರ್ಣ ಮುಷ್ಟಿಪದ್ದತಿಯಿಂದ ಆದಷ್ಟು 7-8 ನಿಮಿಷಗಳಲ್ಲಿ ಹಿಂಡಬೇಕು. ಇದರಿಂದ ಕೆಚ್ಚಲು ಬಾವು ರೋಗ ಹಾಗೂ ಮೊಲೆಗೆ ಆಗಬಹುದಾದ ಗಾಯಗಳನ್ನು ತಡೆಗಟ್ಟಿ ಹೆಚ್ಚಿಗೆ ಹಾಲಿನ ಉತ್ಪಾದನೆ ಪಡೆಯಬಹುದು.
- ಹಿಂಡುವ ಮತ್ತು ಹಾಲು ಶೇಖರಿಸುವ ಪಾತ್ರೆಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು. ಹಾಲು ಹಿಂಡಲು ಉಪಯೋಗಿಸುವ ಪಾತ್ರೆಗಳನ್ನು ಅಡುಗೆ ಮಾಡಲು ಉಪಯೋಗಿಸಬಾರದು.
- ಹಾಲು ಹಿಂಡುವ ಸಮಯದಲ್ಲಿ ಜಾನುವಾರುಗಳಿಗೆ ಹೊಡೆಯುವುದು ಮತ್ತು ಬೆದರಿಸುವುದನ್ನು ಮಾಡಬಾರದು. ಇದರಿಂದ ಹಾಲಿನ ಇಳುವರಿಯು ಕಡಿಮೆಯಾಗುವ ಸಂಭವವಿರುತ್ತದೆ.
- ದಿನಕ್ಕೆ 10 ಲೀಟರಿಗಿಂತ ಹೆಚ್ಚಿಗೆ ಹಾಲು ಹಿಂಡುವಂತಹ ಮಿಶ್ರತಳಿ ಆಕಳುಗಳನ್ನು ಯಂತ್ರದಿಂದಲೂ ಹಿಂಡಬಹುದು. ಹೀಗೆ ಮಾಡುವಾಗ ಶುಚಿತ್ವವನ್ನು ಕಾಪಾಡುವುದು ಹಾಗೂ ಎಚ್ಚರಿಕೆ ವಹಿಸುವುದು ಅತ್ಯವಶ್ಯಕ.
- ರಾಸು ಕರು ಹಾಕಿದ ಎರಡು ತಿಂಗಳ ಒಳಗೆ ಬೆದೆಗೆ ಬಂದು ಮೂರು ತಿಂಗಳೊಳಗಾಗಿ ಗರ್ಭಧರಿಸಬೇಕು. ಒಂದು ವೇಳೆ ಬೆದೆಗೆ ಬರದಿದ್ದರೆ ಮತ್ತು ಗರ್ಭ ಧರಿಸದಿದ್ದರೆ, ಪಶುವೈದ್ಯರಿಂದ ಪರೀಕ್ಷಿಸಿ ಸೂಕ್ತ ಔಷದೋಪಚಾರ ಮಾಡಿಸಬೇಕು. ಇದರಿಂದ ವರ್ಷಕ್ಕೊಂದು ಕರು ಹಾಗೂ ಸತತ ಹಾಲನ್ನು ಪಡೆಯಬಹುದು.
- ಹಾಲು ಹಿಂಡುವಾಗ ಜಾನುವಾರು ಗರ್ಭ ಧರಿಸಿದ ಮೇಲೆ ಅದು ಮುಂದೆ ಕರು ಹಾಕುವ ಮೂರು ತಿಂಗಳುಗಳ ಮೊದಲೇ ಹಾಲು ಹಿಂಡುವುದನ್ನು ಕ್ರಮೇಣ ನಿಲ್ಲಿಸಬೇಕು. ಅಂದರೆ ಮೊದಲು ಸ್ವಲ್ಪ ದಿವಸ ಒಪ್ಪತ್ತು ಹಿಂಡಬೇಕು. ನಂತರ ಎರಡು ದಿನಕ್ಕೊಮ್ಮೆ, ಮೂರು, ನಾಲ್ಕು ದಿವಸಕ್ಕೊಮ್ಮೆ, ಐದು, ಆರು ದಿವಸಕ್ಕೊಮ್ಮೆ, ಕೊನೆಗೆ ವಾರಕ್ಕೊಮ್ಮೆ ಹಿಂಡಿ ಪೂರ್ತಿ ಹಾಲು ಹಿಂಡುವುದನ್ನು ನಿಲ್ಲಿಸಿ, ಎರಡು ತಿಂಗಳು ವಿರಾಮ ಕೊಡಬೇಕು. ಹೀಗೆ ಮಾಡುವುದರಿಂದ ಗರ್ಭದಲ್ಲಿನ ಕರುವಿನ ಬೆಳವಣಿಗೆಯ ಮೇಲೆ ಮತ್ತು ಮುಂದಿನ ಸೂಲಿನ ಹಾಲಿನ ಇಳುವರಿಯ ಮೇಲೆ ಒಳ್ಳೆಯ ಪರಿಣಾಮ ಆಗುವುದು.
- ಹೆಚ್ಚಿಗೆ ಹಾಲು ಹಿಂಡುವ ಮಿಶ್ರತಳಿ ಹಸುಗಳನ್ನು ಆದಷ್ಟು ಮನೆಯಲ್ಲಿ ಕಟ್ಟಿ ಮೇಯಿಸುವುದು ಒಳ್ಳೆಯದು. ಜೊತೆಗೆ ದಿನಕ್ಕೆ ಒಂದೆರಡು ತಾಸು ತಂಪಾದ ವೇಳೆಯಲ್ಲಿ ಹೊರಗಡೆ ಹೋಗಲು ಬಿಡುವುದರಿಂದ ಅವುಗಳ ಆರೋಗ್ಯ ಉತ್ತಮವಾಗಿರುತ್ತದೆ.
ಹಾಲು ಹಿಂಡುವ ದನಗಳ ಆಹಾರದ ನಿರ್ವಹಣೆ
- ಒಂದು ಜಾನುವಾರಿಗೆ ಅದರ ಹಾಲಿನ ಇಳುವರಿಯ ಶೇಕಡ 40-50 ಪ್ರಮಾಣದಷ್ಟು ದಾಣಿ ಮಿಶ್ರಣವನ್ನು ಒಂದು ದಿವಸಕ್ಕೆ ಕೊಡಬೇಕು (ಉದಾ. ಪ್ರತಿ 2-2.5 ಲೀಟರ್ ಹಾಲಿನ ಉತ್ಪಾದನೆಗೆ 1 ಕೆ.ಜಿ. ದಾಣಿ ಮಿಶ್ರಣ). ಒಂದು ವೇಳೆ ಉತ್ತಮ ಗುಣಮಟ್ಟದ ಹಸಿರು ಮೇವು ಲಭ್ಯವಿದ್ದಲ್ಲಿ ದಾಣಿ ಮಿಶ್ರಣದ ಪ್ರಮಾಣವನ್ನು ಕಡಿಮೆ ಮಾಡಬಹುದು.
- ಒಂದು ವೇಳೆ ಜಾನುವಾರು ಹಾಲು ಹಿಂಡುತ್ತಿದ್ದು ಅದರ ಜೊತೆಗೆ ಗರ್ಭ ಧರಿಸಿದ್ದರೆ ಹಾಲಿನ ಇಳುವರಿಯ ಅರ್ಧ ಪ್ರಮಾಣದ ದಾಣಿ ಮಿಶ್ರಣದ ಜೊತೆಗೆ ಗರ್ಭ ಧರಿಸಿದ ಆರು ತಿಂಗಳುಗಳವರೆಗೆ ಒಂದು ಕೆ.ಜಿ. ಹಾಗೂ ಆರು ತಿಂಗಳುಗಳ ನಂತರ ಎರಡು ಕೆ.ಜಿ. ದಾಣಿ ಮಿಶ್ರಣವನ್ನು ಹೆಚ್ಚಿಗೆ ಕೊಡಬೇಕು.
- ಪ್ರತಿ ಜಾನುವಾರುಗಳಿಗೆ ಹೊಟ್ಟೆ ತುಂಬುವಷ್ಟು ಹಸಿರು ಮೇವು ಮತ್ತು ಒಣ ಮೇವು ಕೊಡಬೇಕು. ಒಂದು ವೇಳೆ ಹಸಿರು ಮೇವು ಸಿಗದಿದ್ದರೆ¸ ಮೇವು ಕೊಡಬೇಕು. ಹಸಿರು ಮೇವುಗಳಾದ ಅದರಲ್ಲೂ ಗೋವಿನ ಜೋಳ ಹಾಗೂ ಕುದುರೆ ಮೆಂತೆ ಸೊಪ್ಪನ್ನು ತಿನ್ನಿಸುವುದರಿಂದ ದಾಣಿ ಮಿಶ್ರಣದ ಖರ್ಚನ್ನು ಕಡಿಮೆ ಮಾಡಿ ಹೆಚ್ಚಿನ ಹಾಲಿನ ಉತ್ಪಾದನೆಯನ್ನು ಪಡೆಯಬಹುದು.
- ಹಾಲು ಹಿಂಡುವ ದನಗಳಿಗೆ ನೀರು ಹೆಚ್ಚಿಗೆ ಬೇಕಾಗಿರುವುದರಿಂದ ಒಂದು ದಿವಸಕ್ಕೆ ಕನಿಷ್ಟ 5-6 ಸಲ ಸ್ವಚ್ಚವಾದ ನೀರನ್ನು ಕುಡಿಸಬೇಕು. ಇಲ್ಲದಿದ್ದರೆ ಹಾಲಿನ ಇಳುವರಿ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ.
ಈ ರೀತಿ ಜಾನುವಾರುಗಳ ಪಾಲನೆ ಮತ್ತು ಪೋಷಣೆಯನ್ನು ಅನುಸರಿಸುವುದರಿಂದ ಪ್ರತಿ ಒಂದರಿಂದ ಒಂದುವರೆ ವರ್ಷಕ್ಕೊಂದು ಕರು ಹಾಗೂ ಎರಡು ಸೂಲುಗಳ ನಡುವೆ ಎರಡರಿಂದ ಮೂರು ತಿಂಗಳುಗಳನ್ನು ಬಿಟ್ಟು ಸತತವಾಗಿ ಹಾಲನ್ನು ಪಡೆದು ಹೈನುಗಾರಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು.