Responsive Image

ಆಹಾರ ನಿರ್ವಹಣೆ

ಸಮತೋಲನ ಪಶು ಆಹಾರ

ಸ್ವಾಭಾವಿಕವಾಗಿ ಹೈನುರಾಸುಗಳಿಗೆ ಹಸಿರು ಹುಲ್ಲು ಹಾಗೂ ಒಣ ಮೇವು ಮತ್ತು ವೈಜ್ಞಾನಿಕ ರೀತಿಯಲ್ಲಿ ತಯಾರಿಸಿದ ದಾಣಿ ಮಿಶ್ರಣ ಬೇಕಾಗುತ್ತದೆ. ಹೆಚ್ಚು ಹಾಲು ಉತ್ಪಾದನೆ ಮಾಡಬೇಕಾದಲ್ಲಿ ಸಾಮಾನ್ಯವಾಗಿ ನೀಡುವ ಹಸಿರು ಹುಲ್ಲು ಹಾಗೂ ಒಣ ಹುಲ್ಲಿನ ಮುಖಾಂತರ ಬೇಕಾದಷ್ಟು ಪ್ರಮಾಣದ ಪೋಷಕಾಂಶಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಪೂರ್ವ ನಿರ್ಧಾರಿತ ಪ್ರಮಾಣದಲ್ಲಿ ಸಮತೋಲನ ಪಶು ಆಹಾರವನ್ನು ನೀಡಬೇಕಾಗುತ್ತದೆ. ವೈಜ್ಞಾನಿಕವಾಗಿ ತಯಾರು ಮಾಡಿರುವ ಪಶು ಆಹಾರದಲ್ಲಿ ಹೈನುರಾಸುಗಳಿಗೆ ಬೇಕಾಗುವ ಪ್ರಮಾಣದಲ್ಲಿ ಸಸಾರಜನಕ ದೊರಕಲಿದ್ದು, ಅವುಗಳು ಆರೋಗ್ಯಕರವಾಗಿರಲು ಸಹಾಯ ಮಾಡುವುದಲ್ಲದೇ, ಹಾಲು ಉತ್ಪಾದನೆಯನ್ನು ಹೆಚ್ಚಿಸಿ ಕಾಲಕಾಲಕ್ಕೆ ಗರ್ಭ ಧರಿಸಲು ಸಹಾಯವಾಗುತ್ತದೆ. ಹೈನುರಾಸುಗಳ ತೂಕ, ಹಾಲಿನ ಪ್ರಮಾಣ ಮತ್ತು ಅದರಲ್ಲಿರುವ ಸತ್ವಾಂಶಗಳು, ಕರಾವಿನ ಹಂತ ಅವುಗಳನ್ನು ಗಮನಿಸಿ ರಾಸುಗಳಿಗೆ ನೀಡಬೇಕಾಗಿರುವ ಪೋಷಕಾಂಶಗಳನ್ನು ನಿರ್ಧರಿಸಬೇಕಾಗುತ್ತದೆ.

ಶಿಫಾರಸು ಮಾಡಲಾದ ಹಸಿರು ಮೇವುಗಳೆಂದರೆ, ನೇಪಿಯರ ಹುಲ್ಲು, ಮೇವಿನ ಗೋವಿನ ಜೋಳ, ರೋಡ್ಸ ಹುಲ್ಲು, ಪ್ಯಾರಾ ಹುಲ್ಲು, ಕುದುರೆ ಮೆಂತೆ, ಮೇವಿನ ಅಲಸಂದೆ ಮುಖ್ಯವಾದವು. ಒಂದು ಹೈನು ರಾಸಿಗೆ ಸರಾಸರಿ ದಿನಕ್ಕೆ 15 ರಿಂದ 20 ಕಿ.ಗ್ರಾ. ನಷ್ಟು ಹಸಿಮೇವು ಮತ್ತು 3 ಕಿ.ಗ್ರಾ. ನಷ್ಟು ಒಣ ಮೇವು ಅವಶ್ಯವಿದೆ.

ಹಸಿರು ಹುಲ್ಲನ್ನು ರೈತರು ತಾವೇ ಬೆಳೆಯುವದು ಲಾಭಕರ. ಐದು ಹೈನು ರಾಸುಗಳ ಘಟಕಕ್ಕೆ ಮೇವನ್ನು ಬೆಳೆಯಲು ಕನಿಷ್ಟ ಒಂದು ಎಕರೆ ನೀರಾವರಿ ಭೂಮಿ ಅವಶ್ಯ. ಪ್ರತಿ ಹೈನು ರಾಸಿಗೆ ಆದರ ದೈಹಿಕ ಅವಶ್ಯಕತೆಗಾಗಿ 1 ರಿಂದ 1.5 ಕಿ.ಗ್ರಾ. ನಷ್ಟು ದಾಣಿ ಮಿಶ್ರಣ/ ಪಶು ಆಹಾರ ಬೇಕಾಗುತ್ತದೆ. ಎರಡೂವರೆಯಿಂದ ಮೂರು ಲೀಟರು ಹಾಲಿನ ಉತ್ಪಾದನೆಗೆ 1 ಕಿ.ಗ್ರಾ. ನಷ್ಟು ಹೆಚ್ಚಿನ ದಾಣಿ ಮಿಶ್ರಣ ಬೇಕಾಗುತ್ತದೆ. ಈ ದಾಣಿ ಮಿಶ್ರಣವನ್ನು ಹೊರಗಿನಿಂದ ಖರೀದಿಸುವದಕ್ಕಿಂತ ರೈತರು ತಾವೇ ತಯಾರಿಸಿಕೊಳ್ಳುವದು ಉತ್ತಮ.

Responsive image

ಖನಿಜ ಲವಣಾಂಶಗಳು ಸಹ ಪಶುಗಳ ಆರೋಗ್ಯಕ್ಕೆ ಮತ್ತು ಉತ್ಪಾದನೆಗೆ ಅಗತ್ಯವಾದುದು. ಪಶು ಆಹಾರದಲ್ಲಿ ಕೊಬ್ಬು, ರಂಜಕ, ಸುಣ್ಣ ಮತ್ತು ಅಲ್ಪ ಪ್ರಮಾಣದಲ್ಲಿ ಇರುವ ಖನಿಜಾಂಶಗಳಾದ ಅಯೋಡಿನ್, ಕೋಬಾಲ್ಟ್ ಮತ್ತು ತಾಮ್ರದ ಪಾತ್ರ ಪ್ರಮುಖವಾಗಿವೆ.

ಹಾಲಿನಲ್ಲಿ ಕೊಬ್ಬು ಮತ್ತು ಎಸ್‌ ಎನ್‌ ಎಫ್‌ ಹೆಚ್ಚಿಸುವ ಮಾಹಿತಿಯಿರುವ ವಿಡಿಯೊ: Click Here For YouTube Video

ಹಸಿರು ಮೇವಿನಿಂದ ದೊರೆಯುವ ಪ್ರಯೋಜನಗಳು

  1. ಹಸಿರು ಮೇವಿನಲ್ಲಿ ಸಸಾರಜನಕ (ಪ್ರೋಟಿನ್) ಖನಿಜಾಂಶಗಳು, ಅನ್ನಾಂಗಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಇದರಿಂದ ರಾಸುಗಳು ಆರೋಗ್ಯದಿಂದಿರಲು ಹಾಗೂ ಸಕಾಲಕ್ಕೆ ಗರ್ಭಧರಿಸಲು ಅನುಕೂಲವಾಗುವುದು.
  2. ಹಸಿರು ಮೇವು ರುಚಿಕರವಾಗಿದ್ದು, ಅಧಿಕ ಪ್ರಮಾಣದ ಮೇವನ್ನು ರಾಸುಗಳು ಸೇವಿಸುವುದಲ್ಲದೇ ಸುಲಭವಾಗಿ ಜೀರ್ಣವಾಗುವುದು.
  3. ಸುಧಾರಿತ ತಳಿಗಳ ಹಸಿರು ಮೇವನ್ನು ರಾಸುಗಳಿಗೆ ನಿಯಮಿತವಾಗಿ ನೀಡುವುದರಿಂದ ಹಾಲಿನ ಪ್ರಮಾಣ ಶೇಕಡಾ 40 ರಷ್ಟು ಹೆಚ್ಚಾಗುವುದು.
  4. ಹಸಿರು ಮೇವನ್ನು ರಾಸುಗಳಿಗೆ ನೀಡುವುದರಿಂದ ಸಮತೋಲನ ಪಶು ಆಹಾರದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದ್ದು, ಇದರಿಂದ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯಬಹುದು.

ಆಯಾ ಭೌಗೋಳಿಕ ವಾತಾವರಣಕ್ಕೆ ಹೊಂದಿಕೊಳ್ಳುವ ಉತ್ತಮ ಗುಣಮಟ್ಟದ ಅಧಿಕ ಇಳುವರಿ ನೀಡುವ ಹಸಿರು ಮೇವಿನ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಉತ್ಪಾದಕರು ತಮಗೆ ಸೂಕ್ತವಾದ ಮೇವಿನ ತಳಿಗಳನ್ನು ಆಯ್ಕೆ ಮಾಡಿಕೊಂಡು ಹಸಿರು ಮೇವನ್ನು ಬೆಳೆದು ವೈಜ್ಞಾನಿಕ ವಿಧಾನದಲ್ಲಿ ಹೈನುಗಾರಿಕೆ ಮಾಡಿದಲ್ಲಿ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದನೆ ಮಾಡಬಹುದಾಗಿದೆ.

Responsive image

ಮೇವಿನ ಬೆಳೆಗಳು ಹಾಗೂ ಸಂಗ್ರಹಣೆ

ಪಶುಗಳಿಗೆ ಒದಗಿಸುವ ಒಟ್ಟು ಆಹಾರದಲ್ಲಿ ಶೇ. 60-100 ರಷ್ಟು ಭಾಗ ಮೇವಾಗಿರುತ್ತದೆ. ಪಶುಗಳಿಗೆ ಪೂರೈಸುವ ಒಟ್ಟು ಮೇವಿನಲ್ಲಿ ಶೇ. 65 ಭಾಗ ಉತ್ತಮ ದರ್ಜೆಯ ಏಕದಳ ಹಸಿರು ಮೇವು ಹಾಗೂ ಶೇ. 35 ಭಾಗ ಒಳ್ಳೆಯ ದ್ವೀದಳ ಹಸಿರು ಮೇವಾಗಿದ್ದರೆ ಜಾನುವಾರುಗಳಿಗೆ ಸಮತೋಲನ ಆಹಾರ ಒದಗಿಸಿದಂತಾಗುತ್ತದೆ. ಇದರಿಂದ ಪ್ರತಿದಿನ 5-6 ಲೀ. ಗಳವರೆಗೆ ಹಾಲನ್ನು ದಾಣಿ ಮಿಶ್ರಣವಿಲ್ಲದೆ ಪಡೆಯಬಹುದು. ಆದ್ದರಿಂದ ಮೇವಿನ ಬೆಳೆಗಳು, ಸಾಗುವಳಿ ಕ್ರಮಗಳು ಹಾಗೂ ಅವುಗಳ ಸಂಗ್ರಹಣೆಯ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾದದ್ದು. ನೀರಾವರಿ ಅನುಕೂಲತೆ ಇದ್ದಲ್ಲಿ ಮೇವಿನ ಬೆಳೆ ಯೋಜನೆ ಹಾಕಿಕೊಂಡು ಒಂದು ಎಕರೆ ಪ್ರದೇಶದಲ್ಲಿ 3-5 ಹೈನು ದನಗಳನ್ನು ಸಾಕಬಹುದು.

ಒಂದು ಸಮೀಕ್ಷೆಯ ಪ್ರಕಾರ ಇಂದು ರಾಜ್ಯದಲ್ಲಿ ಶೇ. 35 ರಷ್ಟು ಹಸಿರು ಮೇವಿನ ಕೊರತೆ ಇದೆ. ಮುಂದುವರೆದು, ಇಂದು ಲಭ್ಯವಿರುವ ಆಹಾರ ಧಾನ್ಯ ಬೆಳೆಗಳ ಉಳಿಕೆಗಳು ನಮ್ಮ ಅವಶ್ಯಕತೆಯ ಶೇ. 50 ರಷ್ಟು ಮಾತ್ರ ಪೂರೈಸುತ್ತವೆ. ಇನ್ನು ಹೈನು ರಾಸುಗಳಿಗೆ ಉತ್ತಮ ಪ್ರೋಟಿನ್, ಪಿಷ್ಟ, ಖನಿಜಾಂಶಗಳು ಮತ್ತು ವಿಟಮಿನ್‌ಯುಕ್ತ ಹೆಸರು ಮೇವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡುವದರಿಂದ ಅವುಗಳಿಗೆ ನೀಡುವ ದಾಣಿ ಮಿಶ್ರಣದ ಪ್ರಮಾಣವನ್ನು ಕಡಿಮೆ ಮಾಡಿ ಕೂಡ ಉತ್ಪಾದಕತೆ ಕಾಯ್ದುಕೊಳ್ಳಬಹುದು. ಸಾಮಾನ್ಯವಾಗಿ ಹಸಿರು ಮೇವಿಗಾಗಿ ಹುಲ್ಲುಗಳು, ಏಕದಳ ಹಾಗು ದ್ವಿದಳ ಬಹುವಾರ್ಷಿಕ ಹಾಗೂ ಕೆಲವು ಮೇವಿನ ಮರಗಳು ಲಭ್ಯವಿವೆ.

ಅ. ಏಕದಳ ಮೇವಿನ ಬೆಳೆಗಳು

Responsive image

ಆ. ದ್ವಿದಳ ಮೇವಿನ ಬೆಳೆಗಳು

Responsive image

ಇ. ಮೇವಿನ ಗಿಡ ಮರಗಳು

ಸೂಬಾಬುಲ್, ಆರಿಗಿಡ, ಬಸವನಪಾದ, ಶಿವನಿ, ಸಿಸ್ಸೂ(ಸೀಸಂ), ಬಾಗೆ(ಶಿರೀಷ), ಕರಿಜಾಲಿ, ಬನ್ನಿ ಚೊಗಚೆ, ಕ್ಯಾಲಿಯಾಂಡ್ರಾ, ಮಳೆ ಮರ, ಅರಿಬೇವು, ಗೊಬ್ಬರಗಿಡ, ಅಚಿಜನ, ದಾಮಣಿ, ಹಾಲಿವಾಣ, ವಿಲಾಯತಿ ಹುಣಸೆ

ಈ. ಹುಲ್ಲುಗಾವಲುಗಳು

Responsive image

ಹಸಿರು ಮೇವು ಉತ್ಪಾದನೆಯ ಕುರಿತು ವಿಡಿಯೊ : Click Here For YouTube Video

ಅಜೋಲ್ಲಾ

ಅಜೋಲ್ಲಾವು ನೀರಿನಲ್ಲಿ ತೇಲಾಡಿ ಬೆಳೆಯುವ ಒಂದು ಸಸ್ಯ ಪ್ರಭೇದ. ಇದು ಸಾಮಾನ್ಯವಾಗಿ ಪಾಚಿಯನ್ನು ಹೋಲುತ್ತದೆ. ಇದನ್ನು ಭತ್ತದ ಗದ್ದೆಗಳಲ್ಲಿ ಅಥವಾ ಆಳವಿಲ್ಲದ ನೀರಿನ ಹೊಂಡಗಳಲ್ಲಿ ಬೆಳೆಯಬಹುದು. ಬೆಳವಣಿಗೆಗೆ ಪೂರಕವಾಗುವ ವಾತಾವರಣದಲ್ಲಿ ಅಂದರೆ ರಸಸಾರ 4-7, ಉಷ್ಣಾಂಶ 20-280 ಸೆ., ಶೇ. 50 ರಷ್ಟು ಸೂರ್ಯನ ಬೆಳಕು, ಸಾಪೇಕ್ಷ ತೇವಾಂಶ ಶೇ. 65-80 ಮತ್ತು ಗುಂಡಿಯಲ್ಲಿ ನಿಂತ ನೀರು 5-12 ಸೆಂ.ಮೀ. ಗಳಲ್ಲಿ ಬಹುಬೇಗ ಬೆಳೆಯುವುದರಿಂದ ಪ್ರತಿ ದಿನ ಕೊಯ್ಲು ಮಾಡಬಹುದು. ರೈತರಿಗೆ ಇದು ಅತ್ಯಂತ ಉಪಯುಕ್ತವಾದ ಬೆಳೆಯಾಗಿದೆ. ಅಜೋಲ್ಲಾವನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಲು ಸಾಧ್ಯ. ಈ ಸಸ್ಯವು ಸಾರಜನಕ ಹಾಗೂ ಇತರೆ ಪೋಷಕಾಂಶಗಳನ್ನು ಒಳಗೊಂಡ ಒಂದು ಸಂಪದ್ಬರಿತ ಸಸ್ಯವಾಗಿದ್ದು, ಇದರಲ್ಲಿ ಲಿಗ್ನಿನ್ ಅಂಶವು ಕಡಿಮೆ ಇರುತ್ತದೆ. ಆದ್ದರಿಂದ ಇದನ್ನು ಹಸು, ಕೋಳಿ, ಮೇಕೆ ಹಾಗೂ ಹಂದಿಗಳಿಗೂ ಪೂರಕ ಆಹಾರವಾಗಿ ಬಳಸಬಹುದು.

ಪೌಷ್ಠಿಕಾಂಶ ವಿವರ

        ಒಣ ಅಂಶ	:	- ಶೇ. 8-10
        ಕಚ್ಚಾ ನಾರು	:	- ಶೇ. 12-14
        ಕಚ್ಚಾ ಸಸಾರಜನಕ :  	- ಶೇ. 20-25
        ಲವಣಗಳು	:	- ಶೇ. 10-15
    

ಮೇಲಿನ ಪೋಶಕಾಂಶಗಳ ಜೊತೆಗೆ ಅನ್ನಾಂಗಗಳು (ವಿಟಮಿನ್ ಎ, ಬಿ-12, ಬೀಟಾ ಕೆರೋಟಿನ್), ಬೆಳೆವಣಿಗೆ ಪ್ರಚೋಧಿಸುವ ಜೀವಸತ್ವಗಳು, ಲವಣಗಳಾದ ಕ್ಯಾಲ್ಸಿಯಂ, ರಂಜಕ, ಪೊಟ್ಯಾಷ್, ಕಬ್ಬಿಣ, ತಾಮ್ರ, ಜೀವ ಚೈತನ್ಯಕಾರಕಗಳು ಮತ್ತು ಪಾಲಿಮರ್‌ಗಳಿಂದ ಅಜೋಲ್ಲಾ ಸಮೃದ್ಧವಾಗಿದೆ.

Responsive image Responsive image

ಜಲಕೃಷಿ ಪದ್ಧತಿಯಲ್ಲಿ ಹಸಿರು ಮೇವಿನ ಉತ್ಪಾದನೆ (ಹೈಡ್ರೊಪೋನಿಕ್ಸ)

ಈ ತಂತ್ರಜ್ಞಾನವನ್ನು ಜಲಕೃಷಿ ಅಥವಾ ಆಂಗ್ಲ ಭಾಷೆಯಲ್ಲಿ ಹೈಡ್ರೊಪೋನಿಕ್ಸ ಎಂದು ಕರೆಯುತ್ತಾರೆ. ಈ ವಿಧಾನದಲ್ಲಿ ಬೆಳೆದ ಹಸಿರು ಮೇವನ್ನು ಮೊಳಕೆ / ಚಿಗುರು ಮೇವು ಎನ್ನುತ್ತಾರೆ. ಈ ವಿಧಾನದಲ್ಲಿ ಮೊಳಕೆ / ಚಿಗುರು ಮೇವು ಬೆಳೆಯಲು ಮಣ್ಣಿನ ಅವಶ್ಯಕತೆ ಇರುವುದಿಲ್ಲ. ‘ಹೈಡ್ರೋ’ ಎಂದರೆ ನೀರು ಹಾಗೂ ‘ಪೋನಿಕ್’ ಎಂದರೆ ಕೆಲಸ ಮಾಡುವುದು. ಹೈಡ್ರೋಪೋನಿಕ್ಸ್ ಎಂದರೆ ನಿಯಂತ್ರಿತ ಕೊಠಡಿಯಲ್ಲಿ ಬೀಜ ಮತ್ತು ನೀರನ್ನು ಬಳಸಿ ಮೇವನ್ನು ಉತ್ಪಾದಿಸುವುದು. ಹೈಡ್ರೋಪೋನಿಕ್ ಮೇವನ್ನು ಹಸಿರು ಮನೆಯಲ್ಲು ಬೆಳೆಯಲಾಗುತ್ತಿದೆ. ಈ ಮನೆಯಲ್ಲಿ ಬೆಳಕು, ಉಷ್ಣಾಂಶ, ಆರ್ದ್ರತೆ ಮತ್ತು ಗಾಳಿ (ಆಮ್ಲಜನಕ ಮತ್ತು ಇಂಗಾಲ)ಯ ಪ್ರಮಾಣವನ್ನು ನಿಯಂತ್ರಿಸುವುದರಿಂದ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಮೇವನ್ನು ಉತ್ಪಾದಿಸಬಹುದು.

ಜಲಕೃಷಿ ಪದ್ದತಿಯಿಂದ ಬೆಳೆದ ಹಸಿರು ಮೇವನ್ನು ದಿನವೊಂದಕ್ಕೆ ವಯಸ್ಕ ರಾಸುಗಳಿಗೆ 10-15 ಕೆ.ಜಿ. ಮತ್ತು ಆಡು-ಕುರಿಗಳಿಗೆ 1-2 ಕೆ.ಜಿ. ಕೊಡಬಹುದು. ಜಲಕೃಷಿ ಪದ್ದತಿಯಿಂದ ಚಿಗುರು ಮೇವು ಬೆಳೆಯಲು ತಗಲುವ ವಚ್ಚವು ಬೀಜ, ವಿದ್ಯುತ್ ಮತ್ತು ಕಾರ್ಮಿಕರ ಕೂಲಿಯಿಂದ ನಿರ್ಧರಿಸಲಾಗುತ್ತದೆ. ಆದರೆ ಶೇ. 90 ರಷ್ಟು ವೆಚ್ಚದ ಪಾಲು ಬೀಜಗಳಾಗಿರುತ್ತದೆ, ಹೀಗಾಗಿ ರೈತನು ತಾನು ಬೆಳೆದ ಬೀಜಗಳನ್ನು ಉಪಯೋಗಿಸಿದರೆ ವೆಚ್ಚವನ್ನು ಕಡಿಮೆ ಮಾಡಬಹುದು. ಅಂದಾಜಿನಂತೆ ಒಂದು ಕೆ.ಜಿ ಮೊಳಕೆ ಮೇವು (ಮೆಕ್ಕೆ ಜೋಳ) ಬೆಳೆಯಲು ರೂ 4.50 - 6.50 ಖರ್ಚಾಗಬಹುದು.

Responsive image

ಜಲಕೃಷಿ ಘಟಕ

ಹಸಿರು ಮೇವನ್ನು ಸಂಗ್ರಹಿಸಿಡುವ ವಿಧಾನಗಳು:

ಜಾನುವಾರುಗಳಿಗೆ ಹಸಿರು ಮೇವು ಒದಗಿಸುವುದರಿಂದ ಅವುಗಳ ಆರೋಗ್ಯ ಹಾಗೂ ಉತ್ಪಾದನೆ ಉತ್ತಮವಾಗಿರುತ್ತದೆ ಮತ್ತು ದಾಣಿ ಮಿಶ್ರಣದ ಖರ್ಚನ್ನು ಕಡಿಮೆ ಮಾಡಬಹುದು. ಆದರೆ ವರ್ಷವಿಡೀ ಹಸಿರು ಮೇವನ್ನು ಒದಗಿಸುವುದು ನೀರಾವರಿ ಅನುಕೂಲತೆಗಳಿದ್ದಾಗ ಮಾತ್ರ ಸಾಧ್ಯ. ಆದ್ದರಿಂದ ಹಸಿರು ಮೇವನ್ನು ವರ್ಷವಿಡೀ ಒದಗಿಸಲು ಈ ಕೆಳಗಿನ ವಿಧಾನಗಳಿಂದ ಹಸಿರು ಮೇವನ್ನು ಸಂಗ್ರಹಿಸಿಡಬಹುದು.

  1. ರಸ ಮೇವು (Silage)
  2. ಒಣ ಹಸಿರು ಮೇವು (Hay)
  3. ಕಡಿಮೆ ತೇವಾಂಶದ ಬೆಳೆಗಳ ರಸ ಮೇವು (Haylage)

1. ರಸಮೇವು (Silage):

ಮೇವುಗಳಿಗಾಗಿ ಬೆಳೆಯುವ ಆಹಾರ ಧಾನ್ಯಗಳ ಬೆಳೆಗಳು ಮತ್ತು ಉತ್ತಮ ಹುಲ್ಲುಗಳನ್ನು ರಸಮೇವು ಮಾಡಲು ಬಳಸಬಹುದು. ಶೇ. 65-75 ತೇವಾಂಶವಿರುವ ಮತ್ತು ಹಾಲುಗಾಳು ಇರುವ ಹಂತದಲ್ಲಿ ಬೆಳೆಗಳನ್ನು ಕೊಯ್ದು 1-2 ಅಂಗುಲ ತುಣುಕುಗಳಾಗಿ ಕತ್ತರಿಸಬೇಕು. ಹೀಗೆ ಕತ್ತರಿಸ್ಪಟ್ಟ ಮೇವನ್ನು ಗುಂಡಿಗಳಲ್ಲಿ (ಅನುಕೂಲಕ್ಕೆ ತಕ್ಕಂತೆ ಸಿಗುವ ಯಾವುದೇ ತರಹದ ಕಲ್ಲು, ಕಟ್ಟಿಗೆ, ಸಿಮೆಂಟ್ ಅಥವಾ ಧಾತುವಿನಿಂದ ತಯಾರಿಸಿದ) ಒತ್ತಿ ಒತ್ತಿ ತುಂಬಬೇಕು. ನಂತರ ಗಾಳಿಯಾಡದಂತೆ ಮುಚ್ಚಬೇಕು. ಹೀಗೆ ಮಾಡಿದ 2-3 ವಾರಗಳ ನಂತರ ನಿಯಂತ್ರಿತ ರಸಾಯನಿಕ ಕ್ರೀಯೆಯಿಂದ (ಹುದುಗುವಿಕೆ) ತಯಾರಾದ ಮೇವಿಗೆ ಸೈಲೇಜ್ (Silage) ರಸ ಮೇವು ಅಥವಾ ಹಗೇವು ಮೇವು ಎನ್ನುತ್ತಾರೆ.

ರಸಮೇವಿನ ಲಾಭಗಳು:

  1. ಉತ್ತಮವಾದ ರಸಮೇವು ಹಸಿರುಮೇವು ಸಿಗದೇ ಇರುವ ವೇಳೆಯಲ್ಲಿ ಹಾಲು ಹಿಂಡುವ ಪಶುಗಳಿಗೆ ಅತ್ಯಂತ ಉಪಯುಕ್ತ.
  2. ರಸಮೇವು ತಯಾರಿಕೆಯು ಹವಾಮಾನದ ಬದಲಾವಣೆ ವ್ಯತ್ಯಾಸದ ಮೇಲೆ ಅವಲಂಬಿಸಿರುವುದಿಲ್ಲ. ರಸಮೇವನ್ನು ಸರಿಯಾಗಿ ಸಂಗ್ರಹಿಸಿದಾಗ ಮಾತ್ರ ಅದರಲ್ಲಿ ಇರುವ ಎಲ್ಲಾ ಅವಶ್ಯಕತೆಯ ಪೋಷಕಾಂಶಗಳು ಬಹಳ ದಿನಗಳವರೆಗೆ ಉಳಿಯುತ್ತವೆ.
  3. ದಪ್ಪಕಾಂಡವಿರುವ ಮೇವುಗಳನ್ನು ಒಳ್ಳೆಯ ಗುಣಮಟ್ಟದ ರಸಮೇವನ್ನಾಗಿ ಪರಿವರ್ತಿಸಬಹುದು.
  4. ಮೇವಿನ ಪೌಷ್ಟಿಕತೆಯನ್ನು ಕೆಲವೊಂದು ವಸ್ತುಗಳಿಂದ ಮಿಶ್ರಣ ಮಾಡಿ ಹೆಚ್ಚಿಸಬಹುದು.
  5. ರಸಮೇವು ಮಾಡುವುದರಿಂದ ಮೇವಿನ ಪಚನ ಶಕ್ತಿಯನ್ನು ಹೆಚ್ಚಿಸಬಹುದು.
  6. ಒಣ ಹಸಿರು ಮೇವು ತಯಾರಿಸುವಾಗ ಆಗುವ ಹಾನಿಯನ್ನು ರಸಮೇವು ತಯಾರಿಸುವುದರಿಂದ ಕಡಿಮೆ ಮಾಡಬಹುದು.
  7. ರಸ್ತೆ ಬದಿಯ ಬಂಜರು ಜಮೀನಿನಲ್ಲಿ ಯಥೇಚ್ಚವಾಗಿ ಬೆಳೆಯುತ್ತಿರುವ ನಾಯಿ ಹೆಸರು (ಕ್ಯಾಶಿಯಾ) ಕಸವನ್ನು ರಸಮೇವು ಮಾಡಿ ಉಪಯೋಗಿಸಬಹುದು.
Responsive image
Responsive image

ಸೈಲೋಬ್ಯಾಗ್‌ ಗಳಲ್ಲಿ ಸೈಲೇಜ್‌ (ರಸಮೇವು) ತಯಾರಿಕೆಯ ವಿಡಿಯೊ Click Here For YouTube Video

2. ಒಣ ಹಸಿರು ಮೇವು (Hay):

ಹಸಿರು ಮೇವನ್ನು ಶೇ. 50 ರಷ್ಟು ಹೂವಾಡುವ ಹಂತದಲ್ಲಿ ಕಟಾವು ಮಾಡಿ ತೇವಾಂಶವನ್ನು ಶೇ. 65-85 ರಿಂದ ಶೇ. 15-20 ರ ವರೆಗೆ ತರುವಂತೆ ಮತ್ತು ಕ್ಯಾರೋಟಿನ್ ಪ್ರಮಾಣ ಸಾಧ್ಯವಾದಷ್ಟು ಕಡಿಮೆಯಾಗದಂತೆ ಅಂದರೆ ನೆರಳಿನಲ್ಲಿ ಕೃತಕವಾಗಿಯಾಗಲೀ ಅಥವಾ ನೈಸರ್ಗಿಕವಾಗಿಯಾಗಲೀ ಒಣಗಿಸಿದ ಹಸಿರು ಎಲೆಗಳಿರುವ ಮೇವಿಗೆ “ಒಣ ಹಸಿರು ಮೇವು” ಎನ್ನುತ್ತಾರೆ. ಹೀಗೆ ಮಾಡಿದಾಗ ಸಸ್ಯ ಮತ್ತು ಸೂಕ್ಷಜೀವಿಗಳ ಕಿಣ್ವಗಳು ಮೇವಿನ ಪೋಷಕಾಂಶಗಳನ್ನು ನಾಶಪಡಿಸದಂತೆ ಕಾಪಾಡಲು ಮತ್ತು ಮೇವುಗಳನ್ನು ಸಂಗ್ರಹಿಸಿಡಲು ಸಾಧ್ಯವಾಗುವುದು.

3. ಕಡಿಮೆ ತೇವಾಂಶದ ಬೆಳೆಗಳ ರಸ ಮೇವು (Haylage)

ಕಡಿಮೆ ತೇವಾಂಶವಿರುವ (ಶೇಕಡ 40-50) ಏಕದಳ ಮೇವುಗಳನ್ನು ಗಾಳಿಯಾಡದ ಗುಂಡಿಗಳಲ್ಲಿ ತುಂಬಿ ಕಳಿಸಿದಂತಹ ಮೇವಿಗೆ “ಹೇಲೇಜ್ (Haylage) ಎನ್ನುತ್ತಾರೆ. ಕಡಿಮೆ ಮಳೆಬಿದ್ದು, ತೇವಾಂಶ ಕಡಿಮೆ ಹೊಂದಿರುವ ಬೆಳೆಗಳು ಅಥವಾ ಕಾಳನ್ನು ತೆಗೆದುಕೊಂಡ ಮೇಲೆ ಉಳಿಯುವ ಹಸಿರು ಮೇವುಗಳಿಂದ ಕಡಿಮೆ ತೇವಾಂಶದ ರಸಮೇವನ್ನು ಮಾಡಬಹುದು.

ಯುರಿಯಾ - ಕಾಕಂಬಿ - ನೆಕ್ಕು ಬಿಲ್ಲೆ

ಒಣ ಹುಲ್ಲಿನಲ್ಲ್ಲಿ ಸಸಾರಜನಕ ಮತ್ತು ಖನಿಜಗಳು ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ದನಗಳಿಗೆ ಬರಿ ಒಣ ಹುಲ್ಲನ್ನೇ ನೀಡಿದರೆ ಅವುಗಳಿಂದ ಹೆಚ್ಚು ಉತ್ಪಾದನೆ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಪರಿಹಾರೋಪಾಯವಾಗಿ ಯೂರಿಯಾ, ಕಾಕಂಬಿ, ಖನಿಜಾಂಶಗಳು, ಉಪ್ಪು, ತೌಡು ಮೊದಲಾದವುಗಳ ಮಿಶ್ರಣವನ್ನು ಘನಾಕೃತಿ ಪಡಿಯಚ್ಚುಗಳನ್ನಾಗಿಸಿ ರಾಸುಗಳಿಗೆ ನೆಕ್ಕಲು ನೀಡುವುದರಿಂದ ರಾಸುಗಳಿಗೆ ಬೇಕಾದ ಪೂರಕ ಪೌಷ್ಠಿಕಾಂಶಗಳು ಸಿಗುವುದಲ್ಲದೆ ಒಣ ಹುಲ್ಲಿನ ಪಚನ ಕ್ರಿಯೆಗೆ ಹೆಚ್ಚು ಅನುಕೂಲವಾಗುತ್ತದೆ. ಪ್ರತಿ ದಿನವೂ ನಿಗದಿತ ಪ್ರಮಾಣದಲ್ಲಿ ಯೂರಿಯಾ ಮತ್ತು ಖನಿಜಾಂಶಗಳನ್ನು ಸೇವಿಸುವಂತೆ ಮಾಡಲು ಇವುಗಳನ್ನು ಪಡಿಯಚ್ಚುಗಳ ರೂಪದಲ್ಲಿ ನೀಡಲಾಗುತ್ತಿದೆ. ರಾಸುಗಳು ಅಗತ್ಯಕ್ಕೆ ಅನುಸಾರವಾಗಿ ಪಡಿಯಚ್ಚನ್ನು ನೆಕ್ಕುವುದರಿಂದ ಒಂದೇ ಬಾರಿಗೆ ಯೂರಿಯಾ ಸೇವನೆಯಿಂದಾಗುವ ಅಪಾಯದ ಸಾಧ್ಯತೆ ಕಡಿಮೆ.

ಸೂಚನೆ :

  1. ಯೂರಿಯಾ - ಕಾಕಂಬಿ ನೆಕ್ಕು ಬಿಲ್ಲೆಯನ್ನು ರಾಸುಗಳು ಸುಲಭವಾಗಿ ನೆಕ್ಕಲು ಸಾಧ್ಯವಾಗುವಂತೆ ಇರಿಸಬೇಕು ಹಾಗೂ ಒಂದೇ ಬಾರಿಗೆ ಕಚ್ಚಿ ತಿನ್ನದಂತೆ ನೆಕ್ಕು ಪೆಟ್ಟಿಗೆಯಲ್ಲಿಡಬೇಕು.
  2. ರಾಸುಗಳಿಗೆ ನೀಡುವ ಮೇವು ಮತ್ತು ಪಶು ಆಹಾರಕ್ಕೆ ಅನುಸಾರವಾಗಿ ಮೇಲೆ ತಿಳಿಸಿದಂತೆ ಪಡಿಯಚ್ಚಿನ ಪ್ರಮಾಣವನ್ನು ಒದಗಿಸುತ್ತಿರಬೇಕು.
  3. ನೆಕ್ಕು ಬಿಲ್ಲೆಯನ್ನು ರಾಸಾಯನಿಕ, ಧೂಳು, ಸಗಣಿ, ಗಂಜಲ ಮತ್ತು ಮಳೆಯ ನೀರಿನಿಂದ ರಕ್ಷಿಸಿಡಬೇಕು.
  4. ನೆಕ್ಕು ಬಿಲ್ಲೆಯನ್ನು ನೀರಿನಲ್ಲಿ ಕರಗಿಸಿಕೊಡಬಾರದು.
  5. ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಕರುಗಳಿಗೆ ಯೂರಿಯಾ - ಕಾಕಂಬಿ ನೆಕ್ಕು ಬಿಲ್ಲೆಯನ್ನು ಸೇವನೆ ಮಾಡಿಸಬಾರದು.

ಯೂರಿಯಾದಿಂದ ಒಣ ಮೇವಿನ ಪೌಷ್ಠೀಕರಣ

ಒಣ ಮೇವನ್ನು ಹಾಗೆಯೇ, ರಾಸುಗಳಿಗೆ ನೀಡುವ ಬದಲು ಪರಿಷ್ಕರಿಸಿದ ಹುಲ್ಲನ್ನು ನೀಡುವುದರಿಂದ ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ.

ಪ್ರಯೋಜನಗಳು :

  1. ಮೇವು ಹಾಳಾಗುವುದನ್ನು ತಡೆಯಬಹುದು
  2. ಹೆಚ್ಚು ಜೀರ್ಣವಾಗುತ್ತದೆ
  3. ಸಸಾರಜನಕ ಪ್ರಮಾಣ ಹೆಚ್ಚಾಗುತ್ತದೆ
  4. ಮೇವಿನ ಸೇವನೆ ಹೆಚ್ಚಾಗುತ್ತದೆ
  5. ಹಾಲು ಉತ್ಪಾದನೆ ಹೆಚ್ಚಾಗುತ್ತದೆ

ಒಂದು ನೂರು ಕೆ.ಜಿ ಹುಲ್ಲಿನ/ಕಬ್ಬಿನ ವಾಡಿಯ ಯೂರಿಯಾ ಪರಿಷ್ಕರಣೆಗೆ ಬೇಕಾಗುವ ಸಾಮಗ್ರಿಗಳು/ಸಲಕರಣೆಗಳು

  1. ಯೂರಿಯಾ-04 ಕೆ.ಜಿ.
  2. ನೀರು ಪ್ರತಿ ನೂರು ಕೆ.ಜಿ. ಹುಲ್ಲಿಗೆ 40-45 ಲೀಟರ್
  3. 100 ಕೆ.ಜಿ. ಕಬ್ಬಿನವಾಡಿ/ಜೋಳದ ಕಣಕಿ/ಭತ್ತದ ಹುಲ್ಲು
  4. ಬ್ಯಾರಲ್/ನೀರಿನ ಟಾಕಿ/ಪ್ಲಾಸ್ಟಿಕ್ ಶೀಟ್
  5. ಯೂರಿಯಾ ನೀರು ಸಿಂಪಡಿಸಲು ಯಂತ್ರ/ಜಾರಿ
  6. ತೂಕದ ಯಂತ್ರ ಮಶಿನ್

ಒಣಮೇವು ಯೂರಿಯಾ ಪೌಷ್ಠೀಕರಣ ಸೂತ್ರ

ಕ್ರ.ಸಂ ಹುಲ್ಲು/ವಾಡಿ ಯುರಿಯಾ ನೀರು
1. 25 ಕೆ.ಜಿ 2 ಕೆ.ಜಿ 10-12 ಲೀಟರ
2. 100 ಕೆ.ಜಿ 4 ಕೆ.ಜಿ 40-45 ಲೀಟರ
3. 200 ಕೆ.ಜಿ 8 ಕೆ.ಜಿ 80-90 ಲೀಟರ

ಒಣಮೇವು ಪೌಷ್ಠೀಕರಣದ ವಿಡಿಯೊ : Click Here For YouTube Video

Responsive image

ಪಶು ಆಹಾರದಲ್ಲಿ ಅಸಂಪ್ರದಾಯಕ ಆಹಾರ ಪದಾರ್ಥಗಳು

ಸಾಮಾನ್ಯವಾಗಿ ಬಳಕೆಯಲ್ಲಿ ಇರದಂತಹ ಉಪಆಹಾರ ಪದಾರ್ಥಗಳನ್ನು ಅಸಾಂಪ್ರದಾಯಕ ಆಹಾರ ಪದಾರ್ಥಗಳೆಂದು ಕರೆಯಲಾಗುತ್ತದೆ. ಪಶು ಆಹಾರದಲ್ಲಿ ಕೆಲವೊಂದು ಭಾಗ ಈ ಅಸಾಂಪ್ರದಾಯಕ ಪದಾರ್ಥಗಳನ್ನು ಬಳಸುವುದರಿಂದ ಪ್ರಾಣಿಗಳ ಶರೀರದಲ್ಲಿ ಯಾವುದೇ ಹಾನಿಕಾರಕ ಪರಿಣಾಮವಿಲ್ಲದಂತೆ ಆಗಿ ಪಶು ಆಹಾರದ ಬೆಲೆ ಹಾಗೂ ಉತ್ಪಾದನಾ ಬೆಲೆಯನ್ನು ಕಡಿಮೆ ಮಾಡಬಹುದು.

  1. ಭತ್ತದ ಗೊಳಲಿ (ಸಿಪ್ಪೆ) ಮತ್ತು ಕಾಫಿ ಸಿಪ್ಪೆ : ಈ ಸಿಪ್ಪೆಗಳು ಪ್ರಾಣಿಗಳಿಗೆ ತಿನ್ನಲು ರುಚಿಕರ ಆಗಿರುವುದಿಲ್ಲ. ಆದ್ದರಿಂದ ಕೆಲವೊಂದು ಸಂದರ್ಭಗಳಲ್ಲಿ ಇವನ್ನು ಪಶು ಆಹಾರದ ಸ್ವಲ್ಪ ಭಾಗವನ್ನಾಗಿ ಉಪಯೋಗಿಸಬಹುದು. ಈ ಸಿಪ್ಪೆಗಳಲ್ಲಿ ಪೌಷ್ಟಿಕಾಂಶಗಳು ಬಹಳ ಕನಿಷ್ಟವಾಗಿರುತ್ತವೆ. ಇವುಗಳಿಂದ ಹೆಚ್ಚಾಗಿ ಪಶುಗಳ ಹೊಟ್ಟೆ ತುಂಬಿ ಹಸಿವು ನೀಗಬಹುದು. ಇವುಗಳ ಜೊತೆ ಇತರ ಪೌಷ್ಟಿಕ ಆಹಾರ ಕೊಡುವುದು ಅತೀ ಅವಶ್ಯಕವಾದದ್ದು.
  2. ಶೇಂಗಾ ಸಿಪ್ಪೆ: ಇದು ಮೇಲೆ ಹೇಳಿದ ಸಿಪ್ಪೆಗಳಂತೆ ಬಹಳ ಕನಿಷ್ಟ ಗುಣಮಟ್ಟದ್ದಾಗಿದೆ. ಇದನ್ನು ಪುಡಿ ಮಾಡಿ ಪಶು ಆಹಾರದಲ್ಲಿ ಕೆಲ ಪ್ರಮಾಣದಲ್ಲಿ ಸೇರಿಸಿ ಮೇಯಿಸಬಹದು.
  3. ಮಾವಿನ ಗೊಟ್ಟದ ಒಳ ಭಾಗ: ಮಾವಿನ ಹಣ್ಣನ್ನು ತಿಂದು ಬಿಸಾಡಿದ ಗೊಟ್ಟ ಅಥವಾ ಮಾವಿನ ಹಣ್ಣನ್ನು ಸಂಸ್ಕರಿಸುವ ಕಾರ್ಖಾನೆಗಳಲ್ಲಿ ಬೇಡವಾದಂತಹ ಗೊಟ್ಟಗಳನ್ನು ಸಿಪ್ಪೆ ತೆಗೆದು ಒಳಭಾಗದ ಅಂಶವನ್ನು ಜಾನುವಾರುಗಳ ಆಹಾರದಲ್ಲಿ ಉಪಯೋಗಿಸಬಹುದು.
  4. ಜಾಲಿ ಗಿಡದ ಕಾಯಿ: ಈ ಕಾಯಿಗಳಲ್ಲಿ ಪ್ರತಿಶತ 14 ಭಾಗ ಪ್ರೋಟಿನ್ ಮತ್ತು 65 ಭಾಗ ಶಕ್ತಿ ಇದೆಯೆಂಬುದು ಕಂಡು ಬಂದಿದೆ. ಇದನ್ನು ಕೆಲ ಪ್ರಮಾಣದಲ್ಲಿ ಪಶು ಆಹಾರ ತಯಾರಿಸಲು ಉಪಯೋಗಿಸಬಹುದು.
  5. ಹುಣಸೆ ಬೀಜ: ಇದು ಒಂದು ಉತ್ತಮ ಪಶು ಆಹಾರವಾಗಬಹುದು. ಇದರಲ್ಲಿರುವ ಟ್ಯಾನಿನ್ ಅಂಶ ಕಡಿಮೆ ಮಾಡಲು ಈ ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ಚೆನ್ನಾಗಿ ಒಣಗಿಸಿ, ಬೀಜದ ಮೇಲಿನ ಕೆಂಪು ಬಣ್ಣದ ಸಿಪ್ಪೆ ತೆಗೆದು ಪುಡಿ ಮಾಡಿ ಉಪಯೋಗಿಸಬಹುದು.
  6. ಮಳೆ ಗಿಡದ ಕಾಯಿ: ರಸ್ತೆಯ ಬದಿಯಲ್ಲಿ ನೆರಳಿಗಾಗಿ ಬೆಳೆಸಿದ ಮಳೆ ಮರಗಳಲ್ಲಿ ಕಾಯಿಗಳು ಕೆಂಪು ಹಾಗೂ ಕಪ್ಪು ಮಿಶ್ರಿತ ಬಣ್ಣದ ಹಣ್ಣಿನಂತಿರುತ್ತವೆ. ಇವುಗಳು ತಿನ್ನಲು ಸಿಹಿಯಾಗಿದ್ದು, ದನಗಳು ತಿನ್ನಲು ಇಷ್ಟಪಡುತ್ತವೆ. ಈ ಕಾಯಿಗಳಲ್ಲಿ 15 ಭಾಗ ಪ್ರೋಟಿನ್ ಹಾಗೂ 66 ಭಾಗ ಶಕ್ತಿ ಇದೆ. ಇವು ಇತರೆ ಮೇವುಗಳ ಕೊರತೆ ಕಾಲದಲ್ಲಿ ಅಂದರೆ ಪ್ರತಿ ವರ್ಷ ಫೆಬ್ರುವರಿಯಿಂದ ಮೇ ತಿಂಗಳವರೆಗೆ ದೊರೆಯುತ್ತವೆ. ಇವುಗಳನ್ನು ಒಣಗಿಸಿ ವರ್ಷವಿಡೀ ಶೇಖರಿಸಿಡಬಹುದು ಮತ್ತು ದನಗಳಿಗೆ ಮೇಯಿಸುವುದರಿಂದ ಅವುಗಳ ಸರ್ವಾಂಗಿಣ ಅಭಿವೃದ್ಧಿಯಾಗುವುದಲ್ಲದೆ ಆಹಾರದ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
  7. ಕಬ್ಬಿನ ಸಿಪ್ಪೆ: ಕಬ್ಬಿನ ಸಿಪ್ಪೆಯಲ್ಲಿ ಪೌಷ್ಟಿಕಾಂಶಗಳು ಬಹಳ ಕಡಿಮೆ ಇರುತ್ತವೆ ಹಾಗೂ ದನಗಳಿಗೆ ಹೆಚ್ಚು ರುಚಿಕರವಾಗಿರುವುದಿಲ್ಲ. ಆದರೂ ಮೇವಿನ ಕೊರತೆ ಇದ್ದಾಗ ಇದನ್ನು ಉಪಯೋಗಿಸಬಹುದು. ಭಾಷ್ಪದಿಂದ ಸಿಪ್ಪೆಯನ್ನು ಸಂಸ್ಕರಿಸಿದಾಗ ಸೇವನೆ ಹೆಚ್ಚಾಗುತ್ತದೆ. ಇದನ್ನು ಯೂರಿಯಾ ಮತ್ತು ಕಾಕಂಬಿ ದ್ರಾವಣದಿಂದ ಉಪಚರಿಸಿ ದನಗಳಿಗೆ ಮೇಯಿಸುವುದರಿಂದ ಅವು ಇಷ್ಟಪಟ್ಟು ತಿನ್ನುತ್ತವೆ.
  8. ಮರಗಳ ಎಲೆಗಳು: ಆರಣ್ಯದಲ್ಲಿ ಬೆಳೆಯುವ ಮರಗಳ ಎಲೆಗಳನ್ನು ಬರಗಾಲದ ಸಮಯದಲ್ಲಿ ಇತರ ಮೇವುಗಳ ಜೊತೆಗೆ ಸ್ವಲ್ಪಪ್ರಮಾಣದಲ್ಲಿ ಬೆರೆಸಿ ಉಪಯೋಗಿಸಬಹುದು.
  9. ಹಿಂಡಿಗಳು: ಬಳಕೆಯಲ್ಲಿಲ್ಲದ ಹಿಂಡಿಗಳಾದ ಬೇವಿನ ಹಿಂಡಿ, ತಂಬಾಕು ಬೀಜದ ಹಿಂಡಿ ಮುಂತಾದವುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಇತರೆ ಪದಾರ್ಥಗಳೊಡನೆ ಬೆರೆಸಿ ಉಪಯೋಗಿಸಬಹುದು.
  10. ಕಾರ್ಖಾನೆಗಳ ಉಪ ಪದಾರ್ಥಗಳು: ಹಣ್ಣಿನ ಹಾಗೂ ಕಾಯಿಪಲ್ಲೆ, ಕಾರ್ಖಾನೆಗಳ ಉಪ ಪದಾರ್ಥಗಳಾದ ಟೊಮ್ಯಾಟೊ, ಮೋಸಂಬಿ, ಕಿತ್ತಳೆ, ಸೇಬು ಹಣ್ಣಿನ ಸಿಪ್ಪೆಗಳನ್ನು ಪಶು ಆಹಾರ ಪದಾರ್ಥಗಳಾಗಿ ಉಪಯೋಗಿಸಬಹುದು.

ಜಾನುವಾರುಗಳನ್ನು ಮೇಯಿಸುವ ಪದ್ಧತಿ

  1. ಎಲ್ಲ ಜಾನುವಾರುಗಳನ್ನು ಆದಷ್ಟು ತಂಪು ಹೊತ್ತಿನಲ್ಲಿ ಮೇಯಿಸುವುದು ಬಹಳ ಒಳ್ಳೆಯದು.
  2. ಮೇವನ್ನು ಗೊದಲಿಯಲ್ಲಿ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಮೇಲಿಂದ ಮೇಲೆ ಹಾಕುವುದರಿಂದ ಮೇವು ಹಾಳಾಗುವುದಿಲ್ಲ.
  3. ದಾಣಿ ಮಿಶ್ರಣವನ್ನು ಒಪ್ಪತ್ತು ನೀರಿನಲ್ಲಿ ನೆನೆಸಿ ಮೇಯಿಸಿದರೆ ಬಹಳ ಉತ್ತಮ.
  4. ಒಣ ಅಥವಾ ಹಸಿರು ಮೇವನ್ನು ಸಣ್ಣದಾಗಿ ತುಂಡರಿಸಿ ಜೊತೆಗೆ ದಾಣಿಮಿಶ್ರಣವನ್ನು ಬೆರೆಸಿ ಮೇಯಿಸಿದರೆ ಸಂಪೂರ್ಣ ಬಳಕೆಯಾಗುತ್ತದೆ.
  5. ಮೇವಿನ ಕೊರತೆಯಿದ್ದಾಗ ಮೊದಲು ಉತ್ಪಾದನೆಯಲ್ಲಿರುವ ಹಾಗೂ ಗರ್ಭಧರಿಸಿದ ದನಗಳು, ನಂತರ ಸಣ್ಣಕರುಗಳು ಹಾಗೂ ಎತ್ತುಗಳಿಗೆ ಮೇಯಿಸಿ ನಂತರ ಬರಡು ದನಗಳನ್ನು ಮೇಯಿಸಬೇಕು. ದನಗಳು ತಿಂದು ಉಳಿದ ಮೇವನ್ನು ಒಣಗಿಸಿ ಶೇಖರಿಸಿಟ್ಟರೆ ಅದನ್ನು ಅಭಾವ ಕಾಲದಲ್ಲಿ ಉಪಯೋಗಿಸಬಹುದು.
  6. ಮೇಲಿಂದ ಮೇಲೆ ದನಗಳಿಗೆ ಒಳ್ಳೆಯ ನೀರನ್ನು ಕುಡಿಸಬೇಕು ಮತ್ತು ಬೇಸಿಗೆಯಲ್ಲಿ ಮೈಮೇಲೆ ನೀರನ್ನು ಹಾಕುತ್ತಿರಬೇಕು.

ಆಹಾರ ಮಿಶ್ರಣ/ ದಾಣಿ ಮಿಶ್ರಣ ಘಟಕ

ಪರಿಪೂರ್ಣ ಆಹಾರ ಮಿಶ್ರಣ ಘಟಕದಲ್ಲಿ ಒಣಮೇವನ್ನು ತುಂಡು ಮಾಡುವ ಯಂತ್ರ, ಮೇವು ಹಾಗೂ ದಾಣಿ ಮಿಶ್ರಣವನ್ನು ಪುಡಿಮಾಡುವ ಯಂತ್ರ ಹಾಗೂ ಪುಡಿಮಾಡಿದ ಆಹಾರ ಪದಾರ್ಥವನ್ನು ಮಿಶ್ರಣ ಮಾಡುವ ಯಂತ್ರವನ್ನು ಒಂದೇ ಘಟಕದಲ್ಲಿ ಅಳವಡಿಸಿ ಮೇವು ಹಾಗೂ ಇತರ ಪದಾರ್ಥಗಳನ್ನು ಒಟ್ಟಿಗೆ ಪೂರೈಕೆ ಮಾಡಿ ಮಿಶ್ರಣವನ್ನು ಮಾಡಬಹುದು. ಇಂತಹ ಪರಿಪೂರ್ಣ ಆಹಾರ ಮಿಶ್ರಣ ಘಟಕವನ್ನು ಹಳ್ಳಿಯ ಮಟ್ಟದಲ್ಲಿ ಸರಕಾರಿ ಅಥವಾ ಸಹಕಾರಿ ವ್ಯವಸ್ಥೆಯಡಿ ಸ್ಥಾಪಿಸಿ ರೈತರು ತಮ್ಮಲ್ಲಿ ಲಭ್ಯವಿರುವ ಮೇವು ಮತ್ತು ಆಹಾರ ಪದಾರ್ಥವನ್ನು ಉಪಯೋಗಿಸಿಕೊಂಡು ಉತ್ತಮ ಗುಣಮಟ್ಟ, ಕಡಿಮೆ ಖರ್ಚಿನ ಸಂಪೂರ್ಣ ಆಹಾರ ಮಿಶ್ರಣವನ್ನು ತಯಾರಿಸಿಕೊಳ್ಳಬಹುದು.

ಹಳ್ಳಿಯ ಮಟ್ಟದಲ್ಲಿ ಇಂತಹ ಘಟಕವನ್ನು ಸ್ಥಾಪಿಸುವುದರಿಂದ ಆಗುವ ಉಪಯೋಗಗಳೆಂದರೆ;