ಹಿತ್ತಲ ಪದ್ಧತಿಯ ಕೋಳಿ ಸಾಕಾಣಿಕೆಯು ಗ್ರಾಮೀಣ ಕುಟುಂಬಗಳ ಹಳೆಯ ಕೃಷಿ ಚಟುವಟಿಕೆಯಾಗಿದ್ದು, ಭಾರತದಲ್ಲಿ ಇನ್ನೂ ಜನಪ್ರಿಯವಾಗಿದೆ. ಕಡಿಮೆ ಹೂಡಿಕೆಯ ವೆಚ್ಚ ಮತ್ತು ಹೆಚ್ಚಿನ ಆರ್ಥಿಕ ಲಾಭವನ್ನು ಹೊಂದಿರುವ ಈ ವೃತ್ತಿಯು ಭೂಹೀನ ಮತ್ತು ಬಡ ರೈತರಿಗೆ ಪ್ರಬಲವಾದ ಆದಾಯದ ಮೂಲವಾಗಿದೆ. ಇದನ್ನು ಮನೆಯಲ್ಲಿ ಮಹಿಳೆಯರು, ಮಕ್ಕಳು ಮತ್ತು ಮನೆಯ ಹಿರಿಯ ಸದಸ್ಯರು ಸುಲಭವಾಗಿ ನಿರ್ವಹಿಸಬಹುದು.
ಕುಟುಂಬವು ಸಾಕಿರುವ ಕೋಳಿಯ ಮಾಂಸ ಮತ್ತು ಮೊಟ್ಟೆಗಳನ್ನು ಬಡ ಕುಟುಂಬಗಳ ಪ್ರೋಟೀನ್ ಮತ್ತು ಶಕ್ತಿಯ ಅವಶ್ಯಕತೆಗಳನ್ನು ಪೂರೈಸುವ ಅತ್ಯುತ್ತಮ ಮತ್ತು ಅಗ್ಗದ ಮೂಲವೆಂದು ಪರಿಗಣಿಸಲಾಗುತ್ತದೆ.
ಸಾಂಪ್ರದಾಯಿಕವಾಗಿ, ಹಿತ್ತಲಿನ ಕೋಳಿ ಸಾಕಣೆ ಕಡಿಮೆ ಹೂಡಿಕೆಯ ವ್ಯವಹಾರವಾಗಿದ್ದು, ಇದು ರಾತ್ರಿ ಆಶ್ರಯಕ್ಕಾಗಿ ಸ್ಥಳೀಯ ವ್ಯವಸ್ಥೆ, ಸ್ಕ್ಯಾವೆಂಜಿಂಗ್ ವ್ಯವಸ್ಥೆ, ನೈಸರ್ಗಿಕ ಕಾವಿನ ಮೂಲಕ ಮೊಟ್ಟೆಯೊಡೆಯುವಿಕೆ, ಕಡಿಮೆ ಗುಣಮಟ್ಟದ ಆಹಾರ, ಕಳಪೆ ಉತ್ಪಾದಕತೆ, ಸ್ಥಳೀಯ ಮಾರುಕಟ್ಟೆ ಮತ್ತು ಯಾವುದೇ ಆರೋಗ್ಯ ರಕ್ಷಣಾ ಅಭ್ಯಾಸವಿಲ್ಲದ ಲಕ್ಷಣಗಳಿಂದ ನಿರೂಪಿಸಲ್ಪಟ್ಟಿದೆ.
ಭಾರತದಲ್ಲಿ ಕೋಳಿ ಸಾಕಣೆಯ ಒಟ್ಟು ಉತ್ಪಾದನೆಯಲ್ಲಿ ವಾಣಿಜ್ಯ ವಲಯವು ಸುಮಾರು 70% ರಷ್ಟು ಮತ್ತು ಉಳಿದ 30% ರಷ್ಟು ಅಸಂಘಟಿತ ವಲಯವು ಕೊಡುಗೆ ನೀಡುತ್ತದೆ. ಭಾರತ ಸರ್ಕಾರದ ವರದಿಗಳ ಪ್ರಕಾರ, ಭಾರತದಲ್ಲಿ ಒಟ್ಟು ಕೋಳಿಗಳ ಸಂಖ್ಯೆ 851.81 ಮಿಲಿಯನ್ (20 ನೇ ಜಾನುವಾರು ಗಣತಿಯ ಪ್ರಕಾರ) ಮತ್ತು ಮೊಟ್ಟೆ ಉತ್ಪಾದನೆಯು 2024-25ರ ಅವಧಿಯಲ್ಲಿ ಸುಮಾರು 149.11 ಬಿಲಿಯನ್ ಆಗಿದೆ. 2024-25ರಲ್ಲಿ ವಾರ್ಷಿಕ ತಲಾ ಲಭ್ಯತೆಯು ಸುಮಾರು 106 ಮೊಟ್ಟೆಗಳಷ್ಟಿತ್ತು.
2024-25ರಲ್ಲಿ ಮೊಟ್ಟೆ ಉತ್ಪಾದನೆಯು ಶೇ. 4.4 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ. ವಾಣಿಜ್ಯ ಕೋಳಿ ಸಾಕಣೆಯ ಕಾಣಿಕೆ ಒಟ್ಟು ಉತ್ಪಾದನೆಯ ಶೇ. 84.49 ರಷ್ಟಿದ್ದರೆ, ಹಿತ್ತಲಿನ ಕೋಳಿ ಸಾಕಣೆ ಶೇ. 15.51 ರಷ್ಟಿದೆ.
ಈ ಸಂದರ್ಭದಲ್ಲಿ, ಗ್ರಾಮೀಣ ಕೋಳಿ ಉತ್ಪಾದನೆಯ ಅಭಿವೃದ್ಧಿಯು ಹೆಚ್ಚಿನ ಇನಪುಟ್ ಮತ್ತು ಪರಿಸರಕ್ಕೆ ಹಾನಿಯಿಲ್ಲದೆ ಅಗತ್ಯ ಮತ್ತು ಲಭ್ಯತೆಯ ಅಂತರವನ್ನು ಪೂರೈಸಲು ಸಂಪೂರ್ಣ ಅವಕಾಶವನ್ನು ಹೊಂದಿದೆ. ಇದಲ್ಲದೇ, ಗ್ರಾಮೀಣ ಕೋಳಿ ಉತ್ಪನ್ನಗಳು ವಾಣಿಜ್ಯ ಕೋಳಿಗಳಿಗಿಂತ ಉತ್ತಮ ಬೇಡಿಕೆಯನ್ನು ಹೊಂದಿದ್ದು, ತಮ್ಮದೇ ಆದ ಸ್ಥಾಪಿತ ಮಾರುಕಟ್ಟೆಯನ್ನು ಹೊಂದಿವೆ.
ಭಾರತದಲ್ಲಿ ಹೆಚ್ಚಿನ ಗ್ರಾಮೀಣ ಜನರು ಸಾಂಪ್ರದಾಯಿಕ ಕ್ರಮದಲ್ಲಿ ಕೋಳಿ ಸೇರಿದಂತೆ ಬೇರೆ ಜಾನುವಾರು ಸಾಕಣೆಯನ್ನೂ ಕೂಡ ಚೆನ್ನಾಗಿ ತಿಳಿದಿದ್ದಾರೆ. ಸಾಂಪ್ರದಾಯಿಕ ನಿರ್ವಹಣಾ ಪದ್ಧತಿಗಳ ಜೊತೆ ಕೆಲವು ವೈಜ್ಞಾನಿಕ ಮಧ್ಯಸ್ಥಿಕೆಗಳು ಖಂಡಿತವಾಗಿಯೂ ಗ್ರಾಮೀಣ ಸಮುದಾಯಕ್ಕೆ ನಿಯಮಿತ ಆದಾಯ, ಆಹಾರ ಭದ್ರತೆ ಮತ್ತು ಪೋಷಣೆಯ ಮೂಲಕ ಸುಸ್ಥಿರ ಜೀವನೋಪಾಯವನ್ನು ಒದಗಿಸುತ್ತವೆ.
ದೇಸಿ/ಸ್ಥಳೀಯ ಕೋಳಿಗಳ ಹಿತ್ತಲಿನ ಸಾಕಣೆ ಮತ್ತು ಗ್ರಾಮೀಣ ಕೋಳಿ ಉತ್ಪಾದನೆಗಾಗಿ ವಿಕಸನಗೊಂಡ ಹೊಸ ಕೋಳಿ ತಳಿಗಳ ಸಾಕಣೆಗಳಂತಹ ವಿಷಯಗಳ ಮೇಲೆ ಇನ್ನೂ ಗಮನಹರಿಸುವ ಅವಶ್ಯಕತೆಯಿದೆ.